ಖಾಸಗಿ ವಿಮಾನಯಾನ ಸಂಸ್ಥೆಗಳಿಗೆ ಎದುರಾದ ನಷ್ಟವನ್ನು ಭರಿಸಲು ಕೇಂದ್ರ ಸರಕಾರ ಪ್ಯಾಕೇಜ್ ಘೋಷಿಸಬೇಕು ಎಂದು ಒತ್ತಾಯಿಸಿ ಪ್ರತಿಭಟನೆಗೆ ಕರೆ ನೀಡಿದ್ದ ವಿಮಾನಯಾನ ಕಂಪೆನಿಗಳು ಸರಕಾರದ ಬಿಗಿ ನಿಲುವಿನಿಂದಾಗಿ ಮುಷ್ಕರವನ್ನು ಹಿಂದಕ್ಕೆ ತೆಗೆದುಕೊಂಡಿವೆ.
ಅಗಸ್ಟ್ 18 ರಂದು ದೇಶವ್ಯಾಪಿ ನಡೆಸಲು ಉದ್ದೇಶಿಸಿದ್ದ ಮುಷ್ಕರವನ್ನು ಹಿಂದಕ್ಕೆ ಪಡೆದಿರುವುದಾಗಿ ಭಾರತೀಯ ಏರ್‌ಲೈನ್‌ಗಳ ಒಕ್ಕೂಟದ ಕಾರ್ಯದರ್ಶಿ ಅನಿಲ್ ಬೈಜಾಕ್ ತಿಳಿಸಿದ್ದಾರೆ.
ಮುಷ್ಕರ ನಡೆಸಿ ವಿಮಾನಗಳ ಹಾರಾಟ ನಿಲ್ಲಿಸಿದಲ್ಲಿ ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಕೇಂದ್ರ ವಿಮಾನಯಾನ ಸಚಿವಾಲಯ ಎಚ್ಚರಿಕೆ ನೀಡಿತ್ತು. ಅದಕ್ಕೆ ವಿರುದ್ಧವಾಗಿ 6 ಖಾಸಗಿ ವಿಮಾನಯಾನ ಸಂಸ್ಥೆಗಳು ಮುಷ್ಕರವನ್ನು ನಡೆಸುವುದಾಗಿ ಘೋಷಿಸಿದ್ದವು.
ಮೊದಲು ಬಹುತೇಕ ವಿಮಾನಯಾನ ಕಂಪೆನಿಗಳು ಮುಷ್ಕರಕ್ಕೆ ಬೆಂಬಲ ಸೂಚಿಸಿದ್ದವು ಆದರೆ ಸರಕಾರದ ಕ್ರಮಕ್ಕೆ ಬೆದರಿ ಇಂಡಿಗೋ ,ಪ್ಯಾರಾಮೌಂಟ್ , ಎಂಡಿಎಲ್‌ಆರ್, ಸ್ಪೈಸ್ ಜೆಟ್ ಮುಂತಾದವು ಮುಷ್ಕರಿದಿಂದ ಹಿಂದೆ ಸರಿದಿದ್ದವು.
ಇದರಿಂದ ಕಂಗೆಟ್ಟ ಖಾಸಗಿ ವಿಮಾನಯಾನ ಸಂಸ್ಥೆಗಳ ಒಕ್ಕೂಟ ರವಿವಾರ ರಾತ್ರಿ ಮುಷ್ಕರ ವಾಪಸ್ ಪಡೆದಿರುವುದಾಗಿ ಹಾಗೂ ಸರಕಾರದೊಂದಿಗೆ ಸಂಧಾನಕ್ಕೆ ಸಿದ್ಧವಾಗಿರುವುದಾಗಿ ಪ್ರಕಟಣೆ ಹೊರಡಿಸಿದೆ.