ವೇತನ ಹೆಚ್ಚಳ ಮತ್ತು ಇತರ ಬೇಡಿಕೆಗಳ ಸಂಬಂಧ ಸರಕಾರದ ಜತೆ ನಡೆಸಿದ ಮಾತುಕತೆಗಳು ವಿಫಲವಾದ ಹಿನ್ನಲೆಯಲ್ಲಿ ಸರಕಾರಿ ಸ್ವಾಮ್ಯದ ಬ್ಯಾಂಕುಗಳ ನೌಕರರು ನಡೆಸಲುದ್ದೇಶಿಸಿರುವ ಗುರುವಾರ ಮತ್ತು ಶುಕ್ರವಾರದ ಮುಷ್ಕರ ನಡೆಸುವ ನಿರ್ಧಾರಕ್ಕೆ ಬರಲಾಗಿದೆ.
ಮಾತುಕತೆ ಅಸಮ್ಮತ ರೀತಿಯಲ್ಲಿ ಮುಂದುವರಿದಿದೆ. ಮತ್ತೆ ಮಂಗಳವಾರ ನಾವು ಸಭೆ ನಡೆಸಲಿದ್ದೇವೆ. ಆದರೆ ನಾವೀಗ ಈ ಹಿಂದೆ ಜುಲೈ 21ರಂದು ನೀಡಿದ ನೊಟೀಸ್‌ನಲ್ಲಿ ತಿಳಿಸಿದಂತೆ ಮುಷ್ಕರ ನಡೆಸುವತ್ತ ಸಾಗುತ್ತಿದ್ದೇವೆ ಎಂದು ಅಖಿಲ ಭಾರತ ಬ್ಯಾಂಕ್ ಅಧಿಕಾರಿಗಳ ಸಂಘ (ಎಐಬಿಓಎ) ಉಪಾಧ್ಯಕ್ಷ ಎನ್.ಎಸ್. ವಿರ್ಕ್ ತಿಳಿಸಿದ್ದಾರೆ.
ಬ್ಯಾಂಕ್ ಅಧಿಕಾರಿಗಳ ಮತ್ತು ಬ್ಯಾಂಕಿಂಗ್ ಉದ್ಯಮದ ನೌಕರರ ಒಂಬತ್ತು ಯೂನಿಯನ್‌ಗಳ ಒಕ್ಕೂಟ 'ಯುನೈಟೆಡ್ ಫಾರಮ್ ಆಫ್ ಬ್ಯಾಂಕ್ ಯೂನಿಯನ್ಸ್' (ಯುಎಫ್‌ಬಿಯು) ಈ ಹಿಂದೆ ಮುಷ್ಕರ ನಡೆಸುವ ಬಗ್ಗೆ ನೊಟೀಸ್ ಜಾರಿ ಮಾಡಿತ್ತು. ಈ ಸಂಘಟನೆಯಲ್ಲಿ ವಿರ್ಕ್‌ರವರು ಕೂಡ ಸದಸ್ಯರಾಗಿದ್ದಾರೆ.
10 ಲಕ್ಷಕ್ಕಿಂತಲೂ ಹೆಚ್ಚು ನೌಕರರ ಸದಸ್ಯತ್ವ ಹೊಂದಿರುವ ಯೂನಿಯನ್‌ಗಳು ಬ್ಯಾಂಕು ಮ್ಯಾನೇಜ್‌ಮೆಂಟ್‌ಗಳನ್ನು ಪ್ರತಿನಿಧಿಸುವ ಭಾರತೀಯ ಬ್ಯಾಂಕುಗಳ ಅಸೋಸಿಯೇಷನ್ (ಐಬಿಎ) ಜತೆ ಮಾತುಕತೆ ನಡೆಸುವಂತೆ ಸರಕಾರ ಈ ಹಿಂದೆ ಸೂಚಿಸಿತ್ತು.
ವೇತನ ಹೆಚ್ಚಳ, ಅತ್ಯುತ್ತಮ ಸಾಮಾಜಿಕ ಭದ್ರತಾ ವಲಯ ಮತ್ತು ಸಾವನ್ನಪ್ಪಿದ ಅಥವಾ ಕೆಲಸ ಮಾಡದಂತಹ ಸ್ಥಿತಿಗೆ ತಲುಪಿದ ನೌಕರರ ಕುಟುಂಬಸ್ಥರಿಗೆ ಪರಿಹಾರ ನೆಲೆಯಲ್ಲಿ ಕೆಲಸ ನೀಡಲು ಸಮಗ್ರ ನೀತಿಯೊಂದನ್ನು ಜಾರಿಗೆ ತರುವುದು ಮುಂತಾದ ಬೇಡಿಕೆಗಳನ್ನು ನೌಕರರು ಸರಕಾರದ ಮುಂದಿಟ್ಟಿದ್ದಾರೆ.
ಸರಕಾರದ ಜತೆಗಿನ ಮಾತುಕತೆಯಲ್ಲಿ ಧನಾತ್ಮಕ ಫಲಿತಾಂಶಗಳೇನಾದರೂ ಬಂದಲ್ಲಿ ನಾವು ಮುಷ್ಕರವನ್ನು ಹಿಂಪಡೆಯಲಿದ್ದೇವೆ. ಆದರೆ ಪ್ರಸಕ್ತ ಸ್ಥಿತಿಯಲ್ಲಿ ಮುಷ್ಕರವನ್ನು ಹಿಂಪಡೆಯುವ ಯಾವುದೇ ಪ್ರಸ್ತಾಪ ನಮ್ಮ ಮುಂದಿಲ್ಲ ಎಂದು ವಿರ್ಕ್ ತಿಳಿಸಿದ್ದಾರೆ.