ಜಾಗತಿಕ ಆರ್ಥಿಕತೆಯ ಬಗ್ಗೆ ಹೂಡಿಕೆದಾರರ ನಿರೀಕ್ಷೆಗಳು ಗರಿಗೆದರಿದ ಕಾರಣ ಕಚ್ಚಾ ತೈಲ ಮಾರುಕಟ್ಟೆ ಚೇತರಿಕೆ ಕಂಡಿದ್ದು, ಸೋಮವಾರ ಪ್ರತೀ ಬ್ಯಾರೆಲ್‌ಗೆ 70 ಡಾಲರುಗಳನ್ನೂ ಮೀರಿದೆ.
ನ್ಯೂಯಾರ್ಕ್ ಮರ್ಕಂಟೈಲ್ ಎಕ್ಸ್‌ಚೇಂಜ್‌ನ ಸಿಂಗಾಪುರ ಎಲೆಕ್ಟ್ರಾನಿಕ್ ಮಾರುಕಟ್ಟೆಯಲ್ಲಿ ಸೆಪ್ಟೆಂಬರ್ ವಿತರಣೆಯ ಬೆಂಚ್‌ಮಾರ್ಕ್ ಕಚ್ಚಾ ತೈಲವು 73 ಸೆಂಟ್ಸ್‌ಗಳ ಏರಿಕೆ ಕಂಡಿದ್ದು, 70.18 ಡಾಲರುಗಳಿಗೇರಿದೆ. ಶುಕ್ರವಾರದ ವ್ಯವಹಾರದಲ್ಲಿ 2.51 ಡಾಲರುಗಳ ಏರಿಕೆಯಾಗಿ 69.45 ಡಾಲರುಗಳನ್ನು ಮುಟ್ಟಿತ್ತು.
ಗುರುವಾರ ಮತ್ತು ಶುಕ್ರವಾರ ತೈಲ ಬೆಲೆಯೇರಿಕೆಯಾಗುವ ಮೊದಲು ಕಳೆದ ವಾರ ಕುಸಿತಕ್ಕೊಳಗಾಗಿತ್ತು. ಜಾಗತಿಕ ಆರ್ಥಿಕ ಚೇತರಿಕೆಯ ಬಗೆಗಿನ ಆಶಾವಾದದಿಂದಾಗಿ ಈ ಬೆಳವಣಿಗೆ ಕಂಡು ಬಂದಿದೆ ಎಂದು ಸಿಂಗಾಪುರದ ಮಾರುಕಟ್ಟೆ ತಜ್ಞರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.
ನೈಮ್ಯಾಕ್ಸ್ ವ್ಯವಹಾರದ ಆಗಸ್ಟ್ ವಿತರಣೆಗಾಗಿನ ಗ್ಯಾಸೊಲಿನ್ 1.24 ಸೆಂಟ್ಸ್‌ಗಳ ಏರಿಕೆ ಕಂಡಿದ್ದು, ಪ್ರತಿ ಗ್ಯಾಲನ್‌ಗೀಗ 2.03 ಡಾಲರುಗಳು. ಅದೇ ರೀತಿ ಹೀಟಿಂಗ್ ತೈಲವು 1.11 ಸೆಂಟ್ಸ್‌ಗಳ ಏರಿಕೆಯೊಂದಿಗೆ 1.84 ಡಾಲರುಗಳನ್ನು ಮುಟ್ಟಿದೆ. ಆಗಸ್ಟ್ ವಿತರಣೆಯ ನ್ಯಾಚುರಲ್ ಗ್ಯಾಸ್ 1.6 ಸೆಂಟ್ಸ್‌ಗಳ ಏರಿಕೆಯೊಂದಿಗೆ ಪ್ರತೀ 1,000 ಕ್ಯೂಬಿಕ್ ಫೀಟ್‌ಗೆ 3.64 ಡಾಲರುಗಳನ್ನು ತಲುಪಿದೆ.
ಲಂಡನ್‌ನ ಐಸಿಇ ಫ್ಯೂಚರ್ಸ್ ಎಕ್ಸ್‌ಚೇಂಜ್‌ನ ಬ್ರೆಂಟ್ ದರ 58 ಸೆಂಟ್ಸ್‌ಗಳ ಏರಿಕೆಯೊಂದಿಗೆ ಪ್ರತೀ ಬ್ಯಾರೆಲ್‌ಗೀಗ 72.28 ಡಾಲರುಗಳನ್ನು ತಲುಪಿದೆ.
ಮುಂಬರುವ ದಿನಗಳಲ್ಲಿ ಎಂಟು ತಿಂಗಳ ಗರಿಷ್ಠ ಮಟ್ಟವಾದ 73.23 ಡಾಲರುಗಳನ್ನು ಪ್ರತೀ ಬ್ಯಾರೆಲ್‌ಗೆ ದಾಖಲಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆಯಾದರೂ, ಈಗಿರುವ ಮಟ್ಟವನ್ನು ಕಾಯ್ದುಕೊಳ್ಳಲು ಮಾರುಕಟ್ಟೆಗೆ ಅಸಾಧ್ಯ ಎಂಬ ಮಾತುಗಳೂ ಕೇಳಿ ಬರುತ್ತಿವೆ.