ಸತತ ಒಂಬತ್ತು ತಿಂಗಳು ಕಾಲ ರಫ್ತು ವ್ಯವಹಾರದಲ್ಲಿ ಕುಸಿತ ಮುಂದುವರಿಸಿರುವ ಭಾರತವು, ಕಳೆದ ವರ್ಷದ ಜೂನ್ ತಿಂಗಳಿನ ರಫ್ತಿಗಿಂತ ಶೇ.27.7ರ ಕುಸಿತ ಅನುಭವಿಸಿದೆ.
ವಿಶ್ವದ ಪ್ರಮುಖ ಮಾರುಕಟ್ಟೆಗಳಾದ ಅಮೆರಿಕಾ ಮತ್ತು ಯೂರೋಪ್‌ಗಳಿಗೆ ಆರ್ಥಿಕ ಹಿಂಜರಿತ ಹೊಡೆತ ನೀಡಿದ ಕಾರಣ ಸರಕು ಸಾಗಣೆಯಲ್ಲಿ ಹಿನ್ನಡೆಯುಂಟಾಗಿದೆ.
ಕಳೆದ ವರ್ಷದ ಜೂನ್‌ನಲ್ಲಿ 17.73 ಬಿಲಿಯನ್ ಅಮೆರಿಕನ್ ಡಾಲರ್ ದಾಖಲಿಸಿದ್ದ ಭಾರತದ ರಫ್ತು ವ್ಯವಹಾರವು ಈ ವರ್ಷದ ಅದೇ ತಿಂಗಳಲ್ಲಿ 12.81 ಬಿಲಿಯನ್ ಡಾಲರ್‌ಗಳಿಗೆ ಕುಸಿತ ಕಂಡಿದೆ ಎಂದು ಸೋಮವಾರ ಸರಕಾರ ಬಿಡುಗಡೆ ಮಾಡಿರುವ ವರದಿಯಲ್ಲಿ ತಿಳಿಸಿದೆ.
ಆಮದು ವ್ಯವಹಾರವೂ ಸತತ ಆರು ತಿಂಗಳ ಕುಸಿತವನ್ನು ಮುಂದುವರಿಸಿದೆ. ಕಳೆದ ವರ್ಷದ ಇದೇ ತಿಂಗಳಿಗೆ ಹೋಲಿಸಿದರೆ ಶೇ.29.3ರ ಕುಸಿತ ದಾಖಲಾಗಿದೆ. ಈ ಬಾರಿ ಆಮದು ವ್ಯವಹಾರವಾಗಿದ್ದ ಕೇವಲ ಶೇಕಡಾ 18.97 ಮಾತ್ರ.
2009-10ರ ಆರ್ಥಿಕ ವರ್ಷದ ಮೂರನೇ ತಿಂಗಳಲ್ಲಿ ವ್ಯವಹಾರ ಕೊರತೆಯು 6.16 ಬಿಲಿಯನ್ ಅಮೆರಿಕನ್ ಡಾಲರುಗಳನ್ನು ದಾಖಲಿಸಿದೆ. ಕಳೆದ ವರ್ಷದ ಜೂನ್ ತಿಂಗಳಲ್ಲಿ ಇದು 9.12 ಬಿಲಿಯನ್ ಡಾಲರ್‌ಗಳಾಗಿತ್ತು.
ಮೇ ತಿಂಗಳಲ್ಲಿ ರಫ್ತು ವ್ಯವಹಾರವು ಶೇ.29.2ರ ಕುಸಿತ ಕಂಡು 11.01 ಬಿಲಿಯನ್ ಡಾಲರುಗಳನ್ನು ತಲುಪಿತ್ತು. ಈ ಹಿಂದಿನ ವರ್ಷದ ಇದೇ ತಿಂಗಳಲ್ಲಿ ಅದು 15.55 ಬಿಲಿಯನ್ ಡಾಲರುಗಳಾಗಿದ್ದವು.
ಏಪ್ರಿಲ್‌ನಿಂದ ಜೂನ್‌ವರೆಗಿನ ಅವಧಿಯಲ್ಲಿ ರಫ್ತು ವ್ಯವಹಾರದಲ್ಲಿ ಶೇ.31.3ರ ಕುಸಿತವಾಗಿದೆ. 2008ರ ಇದೇ ಅವಧಿಯಲ್ಲಿ ಇದು 51.54 ಬಿಲಿಯನ್ ಡಾಲರುಗಳಾಗಿದ್ದರೆ, ಈ ವರ್ಷ ಇದು 35.43 ಬಿಲಿಯನ್ ಡಾಲರುಗಳಿಗೆ ಕುಸಿತ ಕಂಡಿದೆ.