ವಿಶ್ವದ ಅತಿ ದೊಡ್ಡ ಸೌರಶಕ್ತಿ ಚಾಲಿತ ಹಬೆ ಯಂತ್ರವನ್ನು ಮಹಾರಾಷ್ಟ್ರದ ಶಿರ್ಡಿಯ ಶ್ರೀ ಸಾಯಿ ಬಾಬಾ ಸಂಸ್ಥಾನದಲ್ಲಿ ಅಳವಡಿಸಲಾಗಿದೆ.
ನೂತನ ಹಾಗೂ ಪುನರ್ಬಳಕೆ ಮಾಡಬಹುದಾದ ಇಂಧನ ಸಚಿವ ಫಾರೂಕ್ ಅಬ್ದುಲ್ಲಾ ಈ ವ್ಯವಸ್ಥೆಯನ್ನು ಇತ್ತೀಚೆಗೆ ಉದ್ಘಾಟಿಸಿದ್ದರು. ಸಾಯಿ ದೇವಳಕ್ಕೆ ಭೇಟಿ ನೀಡುವ ಭಕ್ತರಿಗೆ ಅಡುಗೆ ತಯಾರಿಸಲು ಸೌರಶಕ್ತಿ ಚಾಲಿತ ಹಬೆ ಯಂತ್ರವನ್ನು ಪರಿಚಯಿಸಲಾಗಿದೆ.
ಸೌರಶಕ್ತಿ ಚಾಲಿತ ಈ ವ್ಯವಸ್ಥೆಗೆ ಒಟ್ಟು 1.33 ಕೋಟಿ ರೂಪಾಯಿಗಳನ್ನು ವ್ಯಯಿಸಲಾಗಿತ್ತು. ಇದರಿಂದಾಗಿ ಈಗ ಕಡಿಮೆ ವೆಚ್ಚದಲ್ಲಿ ಆಯೋಜಕರು 20,000 ಜನಕ್ಕೆ ಆಹಾರವನ್ನು ಸುಲಭವಾಗಿ ತಯಾರಿಸಬಹುದಾಗಿದೆ.
ಕೇಂದ್ರ ಸರಕಾರವು ಇದಕ್ಕೆ 58.40 ಲಕ್ಷ ರೂಪಾಯಿಗಳ ಸಬ್ಸಿಡಿ ನೀಡಿತ್ತು. ಇದರೊಂದಿಗೆ ಶ್ರೀ ಸಾಯಿ ಬಾಬಾ ಸಂಸ್ಥಾನವು ಪ್ರತೀ ವರ್ಷ ಒಂದು ಲಕ್ಷ ಕೆ.ಜಿ. ಎಲ್‌ಪಿಜಿ ಗ್ಯಾಸ್ ಉಳಿತಾಯ ಮಾಡಬಹುದಾಗಿದೆ. ಒಂದು ಲಕ್ಷ ಕೆ.ಜಿ. ಗ್ಯಾಸ್ ಬೆಲೆ ಅಂದಾಜು 20 ಲಕ್ಷ ರೂಪಾಯಿಗಳು.
ರಾಜಸ್ತಾನದ ಮೌಂಟ್ ಅಬುವಿನಲ್ಲಿ 10,000 ಮಂದಿ ಪ್ರತಿ ದಿನ ಊಟ ಮಾಡುವಷ್ಟು ಆಹಾರ ತಯಾರಿಸುವ ಸೌರಶಕ್ತಿ ಚಾಲಿತ ಹಬೆ ವ್ಯವಸ್ಥೆಯನ್ನು ಈಗಾಗಲೇ ಸ್ಥಾಪಿಸಲಾಗಿದೆ. ಅದಕ್ಕಿಂತಲೂ ಸ್ವಲ್ಪ ದೊಡ್ಡದಾದ ಯಂತ್ರವಿರುವುದು ಆಂಧ್ರಪ್ರದೇಶದಲ್ಲಿ. ತಿರುಪತಿಯಲ್ಲಿರುವ ಈ ಯಂತ್ರದಲ್ಲಿ ಪ್ರತೀ ದಿನ 15,000 ಭಕ್ತರಿಗೆ ಊಟ ಬೇಯಿಸಬಹುದಾಗಿದೆ. ಇದೀಗ ಶಿರ್ಡಿಯಲ್ಲಿ ಅದಕ್ಕಿಂತಲೂ ದೊಡ್ಡ ಯಂತ್ರವನ್ನು ಸ್ಥಾಪಿಸಲಾಗಿದೆ.
ಶಿರ್ಡಿಯಲ್ಲಿ ಸ್ಥಾಪಿಸಲಾಗಿರುವ ಹಬೆ ವ್ಯವಸ್ಥೆಯು ಪ್ರತಿ ದಿನ 3,500 ಕೆ.ಜಿ. ಹಬೆಯನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ. ಈ ವ್ಯವಸ್ಥೆಯು ಅಡುಗೆ ಮಾಡಲು ಹಬೆಯನ್ನು ಒದಗಿಸುತ್ತದೆ. ಅಲ್ಲದೆ ಕರೆಂಟ್ ಇಲ್ಲದಿರುವ ಸಂದರ್ಭಗಳಲ್ಲಿ ಅಲ್ಲಲ್ಲಿ ನೀರು ಪೂರೈಕೆಯ ಅಗತ್ಯಗಳನ್ನೂ ಈ ಯಂತ್ರವೇ ಮಾಡಿಕೊಳ್ಳುತ್ತದೆ.