ಮುಖ್ಯ ಪುಟ » ಸುದ್ದಿ ಜಗತ್ತು » ವ್ಯವಹಾರ » ವಾಣಿಜ್ಯ ಸುದ್ದಿ » ಸರ್ಕಾರಿ ಉದ್ಯೋಗದಲ್ಲಿ ಮುಸ್ಲಿಂರೆಷ್ಟಿದ್ದಾರೆಂದು ಗೊತ್ತಿಲ್ಲ: ಕೇಂದ್ರ
(Muslim employee | Central govt job | Muslim | Salman Khurshid)
ಸರ್ಕಾರಿ ಉದ್ಯೋಗದಲ್ಲಿ ಮುಸ್ಲಿಂರೆಷ್ಟಿದ್ದಾರೆಂದು ಗೊತ್ತಿಲ್ಲ: ಕೇಂದ್ರ
ನವದೆಹಲಿ, ಸೋಮವಾರ, 3 ಆಗಸ್ಟ್ 2009( 18:00 IST )
ಸರಕಾರಿ ನೌಕರಿಯಲ್ಲಿ ಮುಸ್ಲಿಮರೆಷ್ಟಿದ್ದಾರೆ ಎಂಬ ಬಗ್ಗೆ ಯಾವುದೇ ಅಂಕಿ ಅಂಶವನ್ನು ತಾನು ಹೊಂದಿಲ್ಲವೆಂದು ಸೋಮವಾರ ಕೇಂದ್ರ ಸರಕಾರ ತಿಳಿಸಿದೆ. ಆದರೆ ಒಟ್ಟಾರೆ ಐದು ಅಲ್ಪಸಂಖ್ಯಾತ ವರ್ಗದ ಮಾಹಿತಿ ತನ್ನಲ್ಲಿರುವುದಾಗಿ ಹೇಳಿಕೊಂಡಿದೆ.
ರಾಜ್ಯಸಭೆಗೆ ಲಿಖಿತ ಉತ್ತರ ನೀಡಿರುವ ಅಲ್ಪಸಂಖ್ಯಾತ ವ್ಯವಹಾರಗಳ ರಾಜ್ಯ ಸಚಿವ ಸಲ್ಮಾನ್ ಖುರ್ಷೀದ್, "ಕೇಂದ್ರ ಸರಕಾರದ ಆಧೀನದಲ್ಲಿ ಸೇವೆ ಸಲ್ಲಿಸುತ್ತಿರುವ ಮುಸ್ಲಿಂ ನೌಕರರ ಅಂಕಿ ಅಂಶಗಳನ್ನು ಸರಕಾರ ನಿರ್ವಹಿಸುತ್ತಿಲ್ಲ" ಎಂದರು.
ಅಲ್ಪಸಂಖ್ಯಾತ ಸಮುದಾಯವನ್ನಾಧರಿಸಿ ಅಥವಾ ಸೇವೆಯನ್ನಾಧರಿಸಿ ವೈಯಕ್ತಿಕ ಮತ್ತು ತರಬೇತಿ ಇಲಾಖೆಯು (ಡಿಓಪಿಟಿ) ಮಾಹಿತಿ ಕಲೆ ಹಾಕಿಲ್ಲ ಎಂದು ತಿಳಿಸಿದ ಖುರ್ಷಿದ್, ಐದು ಅಲ್ಪಸಂಖ್ಯಾತ ಸಮುದಾಯವನ್ನು ಒಟ್ಟು ಸೇರಿಸಿ ವರದಿ ತಯಾರಿಸಲಾಗಿದೆ ಎಂದರು.
2006-07ರ ಅವಧಿಯಲ್ಲಿ 12,182 ಅಲ್ಪಸಂಖ್ಯಾತ ಸಮುದಾಯದವರನ್ನು ವಿವಿಧ ಸಚಿವಾಲಯಗಳಿಗೆ ಮತ್ತು ಇಲಾಖೆಗಳಿಗೆ ನೌಕರರನ್ನಾಗಿ ಸೇರಿಸಿಕೊಳ್ಳಲಾಗಿದೆ. 2007-08ರ ಅವಧಿಯಲ್ಲಿ ಇದು 12,195ಕ್ಕೆ ಹಾಗೂ 2008-09ರ ಅವಧಿಯಲ್ಲಿ 4,479 ಮಂದಿಗೆ ಕೇಂದ್ರ ಸರಕಾರಿ ಉದ್ಯೋಗ ನೀಡಲಾಗಿದೆ ಎಂದು ವಿವರಿಸಿದರು.
ಎಲ್ಲಾ ಸಚಿವಾಲಯಗಳು, ಇಲಾಖೆಗಳು, ಸಾರ್ವಜನಿಕ ಕ್ಷೇತ್ರದ ಉದ್ದಿಮೆಗಳು, ಸರಕಾರಿ ಸ್ವಾಮ್ಯದ ಬ್ಯಾಂಕುಗಳು ಮತ್ತು ಹಣಕಾಸು ಸಂಸ್ಥೆಗಳಲ್ಲಿ ಅಲ್ಪಸಂಖ್ಯಾತರನ್ನು ನೇಮಕ ಮಾಡಿಕೊಳ್ಳಲಾಗುತ್ತಿದೆಯೇ ಎಂಬುದನ್ನು ಪರಿಶೀಲನೆ ನಡೆಸುವ ಸಲುವಾಗಿ ಜನವರಿ 8, 2007ರಲ್ಲಿ ವೈಯಕ್ತಿಕ ಮತ್ತು ತರಬೇತಿ ಇಲಾಖೆಯು ಜಾರಿಗೊಳಿಸಿದ ನಿಯಮಾವಳಿಗಳಲ್ಲಿ ತಿಳಿಸಲಾಗಿತ್ತು ಎಂದು ಖುರ್ಷಿದ್ ತಿಳಿಸಿದ್ದಾರೆ.