ಬಂದರುಗಳಲ್ಲಿ ರಾಶಿ ಬಿದ್ದ ಧಾನ್ಯ; ಬೆಲೆಯೇರಿಕೆಗೆ ಇದೇ ಕಾರಣ?
ನವದೆಹಲಿ, ಸೋಮವಾರ, 3 ಆಗಸ್ಟ್ 2009( 19:23 IST )
ದೇಶದ ವಿವಿಧ ಬಂದರುಗಳಲ್ಲಿ ಲೋಡುಗಟ್ಟಲೆ ಧಾನ್ಯ ಅನಾಥವಾಗಿ ಬಿದ್ದಿರುವ ಕಾರಣದಿಂದಾಗಿ ಮಾರುಕಟ್ಟೆಯಲ್ಲಿ ಪ್ರತಿ ಕೆ.ಜಿ. ದ್ವಿದಳ ಧಾನ್ಯ ಬೆಲೆ 100 ರೂಪಾಯಿಗಳಿಗಿಂತಲೂ ಮೇಲೇರಿದೆಯೇ?
ಅದನ್ನು ಅಲ್ಲಗಳೆಯಲಾಗದು. ಪ್ರಮುಖ ಬಂದರುಗಳಲ್ಲಿ ಲಕ್ಷಗಟ್ಟಲೆ ಟನ್ನುಗಳಷ್ಟು ಧಾನ್ಯಗಳು ಹಾಗೂ ಸುಮಾರು 1,600 ಕೋಟಿ ಮೌಲ್ಯದ ಸಕ್ಕರೆ ಯಾರೂ ಕೇಳುವವರಿಲ್ಲದೆ ಬಿದ್ದಿದೆ. ಇದು ಮಾನವನ ಬಳಕೆಗೆ ಅರ್ಹವಾದುದೇ ಎಂಬ ಬಗ್ಗೆಯೇ ಈಗ ಸಂಶಯಗಳು ಹುಟ್ಟಿಕೊಂಡಿವೆ.
ಹಾಗೊಂದು ವೇಳೆ ಇದನ್ನು ತಕ್ಕ ಸಮಯದಲ್ಲಿ ಮಾರುಕಟ್ಟೆಗೆ ಬಿಟ್ಟಿದ್ದಿದ್ದರೆ, ಅವುಗಳ ದರ ಏರಿಕೆ ಈ ಪರಿ ಆಗುತ್ತಿರಲಿಲ್ಲ ಎಂಬ ಅಭಿಪ್ರಾಯಗಳೂ ವ್ಯಕ್ತವಾಗುತ್ತಿವೆ.
ಗೊತ್ತುಪಡಿಸಿದ ಪ್ರಮಾಣವನ್ನು ಅಥವಾ ಇನ್ಸ್‌ಪೆಕ್ಟರುಗಳಿಂದ ಪ್ರಮಾಣೀಕೃತಗೊಂಡಷ್ಟು ಸರ್ಕಾರಿ ಸ್ವಾಮ್ಯದ ಉದ್ದಿಮೆಗಳು ಪಡೆದುಕೊಂಡಿಲ್ಲದ ಕಾರಣ ಆಮದು ಮಾಡಿಕೊಂಡಿರುವ ಸುಮಾರು 6.19 ಲಕ್ಷ ಟನ್ ಧಾನ್ಯಗಳು ಹಾಗೂ ಕಚ್ಚಾ ಸಕ್ಕರೆ ಬಂದರುಗಳಲ್ಲಿ ಬಿದ್ದುಕೊಂಡಿವೆ ಎಂದು ಸರಕಾರಿ ಮೂಲಗಳು ತಿಳಿಸಿವೆ.
ಪ್ರಮುಖ ಬಂದರುಗಳಲ್ಲಿ ಧಾನ್ಯಗಳು ಮತ್ತು ಸಕ್ಕರೆ ದಾಸ್ತಾನು ಕೊಳೆತುಹೋಗುತ್ತಿವೆಯೇ ಎಂದು ಕೃಷಿ ಸಚಿವ ಶರದ್ ಪವಾರ್‌ರನ್ನು ಪ್ರಶ್ನಿಸಿದ್ದಕ್ಕೆ, ನನಗೆ ಗೊತ್ತಿಲ್ಲ ಎಂದಿದ್ದಾರೆ.
ಮ್ಯಾನ್ಮಾರ್ ಸೇರಿದಂತೆ ಇತರ ರಾಷ್ಟ್ರಗಳಿಂದ ಆಮದು ಮಾಡಿಕೊಂಡಿರುವ ಕನಿಷ್ಠ 1.36 ಲಕ್ಷ ಟನ್ ಧಾನ್ಯ ಹಾಗೂ 4.83 ಲಕ್ಷ ಟನ್ ಕಚ್ಚಾ ಸಕ್ಕರೆ ಕೊಲ್ಕತ್ತಾ, ಚೆನ್ನೈ, ಮುಂಬೈ, ಕಾಂಡ್ಲಾ ಮತ್ತು ಕೊಚ್ಚಿ ಬಂದರುಗಳಲ್ಲಿ ಕಳೆದೆರಡು ತಿಂಗಳುಗಳಿಂದ ಬಿದ್ದುಕೊಂಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ತೊಗರಿ, ಹೆಸರು, ಉದ್ದು, ಕೆಂಪು ತೊಗರಿ, ಬಟಾಣಿ ಸೇರಿದಂತೆ ವಿವಿಧ ಧಾನ್ಯಗಳು ಹಾಗೂ ಸಕ್ಕರೆಯು ಕಚ್ಚಾ ಮಾದರಿಯಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.