ಕೃಷ್ಯುತ್ಪನ್ನಗಳ ಮೇಲೆ ಮಾನ್ಸೂನ್ ದುಷ್ಪರಿಣಾಮ ಬೀರಿದ ಹೊರತಾಗಿಯೂ ಪ್ರಸಕ್ತ ಆರ್ಥಿಕ ವರ್ಷದಲ್ಲಿ ಶೇ.7ರವರಗೆ ಆರ್ಥಿಕ ಪ್ರಗತಿ ದಾಖಲಾಗಬೇಕೆಂಬ ನಿರೀಕ್ಷೆ ಯೋಜನಾ ಆಯೋಗದ್ದು.
ನನ್ನ ಪ್ರಕಾರ 2009-10ರ ಅವಧಿಯಲ್ಲಿ ಆರ್ಥಿಕ ಪ್ರಗತಿಯು ಶೇ.6.5ರಿಂದ 7ರ ನಡುವೆಯಿದ್ದರೆ ಅತ್ಯುತ್ತಮ ಫಲಿತಾಂಶವೆನಿಸಬಹುದು ಎಂದು ಯೋಜನಾ ಆಯೋಗದ ಉಪಾಧ್ಯಕ್ಷ ಮಾಂಟೆಕ್ ಸಿಂಗ್ ಅಹುವಾಲಿಯಾ ತಿಳಿಸಿದ್ದಾರೆ.
ಇತ್ತೀಚಿನ ದಿನಗಳಲ್ಲಿ ಕೈಗಾರಿಕಾ ವಲಯವು ಚೇತರಿಸಿಕೊಂಡಿರುವುದು ಪ್ರಸಕ್ತ ಆರ್ಥಿಕ ವರ್ಷಕ್ಕೆ ಪ್ರಗತಿಯನ್ನು ತರಲಿದೆ. ಆದರೆ ಕೃಷಿವಲಯದಲ್ಲಿ ನಾವು ನಿರೀಕ್ಷೆ ಮಾಡಿದ್ದಕ್ಕಿಂತ ಕಡಿಮೆ ಫಲಿತಾಂಶ ಬರಬಹುದು. ಆದರೂ ಅದು ತೀರಾ ಕ್ಷುಲ್ಲಕವೆನಿಸದು ಎಂದು ಅವರು ಅಭಿಪ್ರಾಯಪಟ್ಟರು.
ಮುಂಗಾರುಮಳೆಯ ಅಭಾವದಿಂದಾಗಿ ತೋಟಗಾರಿಕಾ ವಲಯದಲ್ಲಿನ ಪ್ರಗತಿಯ ಮೇಲೆ ಯಾವ ಪರಿಣಾಮ ಬೀರಿದೆ ಎಂಬ ಪ್ರಶ್ನೆಗೆ ಅವರು, "ದೇಶದಲ್ಲಿ ಎಲ್ಲಾ ಕಡೆ ಒಂದೇ ರೀತಿಯಿಲ್ಲ. ಕೆಲವು ಕಡೆ ಇನ್ನೂ ಮಳೆ ಬಂದೇ ಇಲ್ಲ. ಒಟ್ಟಾರೆ ದೇಶದ ಮೇಲೆ ಇದರಿಂದಾಗಿರುವ ಪರಿಸ್ಥಿತಿಯನ್ನು ಈಗಲೇ ಹೇಳಲಾಗದು. ಆದರೂ ಕೆಲವು ರಾಜ್ಯಗಳು ತೊಂದರೆ ಅನುಭವಿಸಿರುವುದು ನಿಜ" ಎಂದರು.
ಮೂರು ವರ್ಷಗಳ ಕಾಲ ಸತತ ಶೇ.9ರ ಪ್ರಗತಿ ದರ ಹೊಂದಿದ್ದ ದೇಶವು, 2008-09ರ ಅವಧಿಯಲ್ಲಿ ಶೇ.6.7ಕ್ಕೆ ಕುಸಿತ ಕಂಡಿತ್ತು. ಜಾಗತಿಕ ಆರ್ಥಿಕ ಕುಸಿತವೇ ಇದಕ್ಕೆ ಪ್ರಮುಖ ಕಾರಣ ಎಂದು ಹೇಳಲಾಗಿದೆ.