2009-10ರ ಅವಧಿಯಲ್ಲಿ ಭಾರತ ಹತ್ತಿ ರಫ್ತು ವ್ಯವಹಾರ ಚೇತರಿಸಿಕೊಳ್ಳಲಿದ್ದು, ವಿದೇಶೀ ಮಾರುಕಟ್ಟೆಯಲ್ಲಿ 1.4 ಮಿಲಿಯನ್ ಟನ್ ಹತ್ತಿ ಮಾರಾಟ ಮಾಡುವ ಸಾಧ್ಯತೆಗಳಿವೆ ಎಂದು ಅಂತಾರಾಷ್ಟ್ರೀಯ ಹತ್ತಿ ಮಂಡಳಿಯು ತಿಳಿಸಿದೆ.
"ಭಾರತದ ಹತ್ತಿ ರಫ್ತು 2009-10ರ ವೇಳೆಗೆ ಪುಟಿದೇಳಲಿದ್ದು, 1.4 ಮಿಲಿಯನ್ ತಲುಪುವ ನಿರೀಕ್ಷೆಗಳಿವೆ" ಎಂದು ಅಂತಾರಾಷ್ಟ್ರೀಯ ಹತ್ತಿ ಸಲಹಾ ಸಮಿತಿಯು (ಎಸಿಎಸಿ) ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ವಿಶ್ವದ ಎರಡನೇ ಅತಿ ದೊಡ್ಡ ಹತ್ತಿ ಉತ್ಪಾದಕ ರಾಷ್ಟ್ರವಾಗಿರುವ ಭಾರತವು ಕಳೆದ ವರ್ಷ ಕಡಿಮೆ ಹತ್ತಿ ರಫ್ತು ಮಾಡಿತ್ತು. ಜಾಗತಿಕ ಆರ್ಥಿಕ ಹಿಂಜರಿತ ಮತ್ತು ಭಾರತೀಯ ರೂಪಾಯಿ ಸ್ಪರ್ಧಾತ್ಮಕ ಮೌಲ್ಯವನ್ನು ಉಳಿಸಿಕೊಳ್ಳದೇ ಇದ್ದ ಕಾರಣ ಉದ್ಯಮಕ್ಕೆ ಹೊಡೆತ ಬಿದ್ದಿತ್ತು ಎಂದು ಈ ಕ್ಷೇತ್ರದ ಪರಿಣತರು ತಿಳಿಸಿದ್ದಾರೆ.
2008-09ರ ಅವಧಿಯಲ್ಲಿ ಒಂದು ಮಿಲಿಯನ್ ಟನ್‌ಗಿಂತಲೂ ಕಡಿಮೆ ಹತ್ತಿ ಭಾರತದಿಂದ ರಫ್ತಾಗಿತ್ತು ಎಂದು ವಿದೇಶಿ ಸರಕು ಸಾಗಣೆದಾರರು ಅಂದಾಜಿಸಿದ್ದಾರೆ.
ಜಾಗತಿಕ ಆರ್ಥಿಕ ಪ್ರಗತಿಯಲ್ಲಿ ಸುಧಾರಣೆ ಕಾಣಿಸಿಕೊಂಡಲ್ಲಿ ವಿಶ್ವದಾದ್ಯಂತ ಹತ್ತಿಗೆ ಬೇಡಿಕೆ ನಿಧಾನವಾಗಿ ಹೆಚ್ಚುವ ಸಾಧ್ಯತೆಗಳಿವೆ ಎಂದು ಐಸಿಎಸಿ ತಿಳಿಸಿದೆ. ಈಗಿನ ಅಂದಾಜು ಪ್ರಕಾರ 2009-10ರಲ್ಲಿ 23.5 ಮಿಲಿಯನ್ ಟನ್‌ನಷ್ಟು ಹತ್ತಿಗೆ ಬೇಡಿಕೆ ಬರಬಹುದಾಗಿದೆ.