ನಾಗರಿಕ ವೈಮಾನಿಕ ಕ್ಷೇತ್ರವನ್ನು ಕುಗ್ಗಿಸುವುದಿಲ್ಲ: ಪಟೇಲ್
ನವದೆಹಲಿ, ಮಂಗಳವಾರ, 4 ಆಗಸ್ಟ್ 2009( 17:18 IST )
ನಾಗರಿಕ ವೈಮಾನಿಕ ಕ್ಷೇತ್ರದಲ್ಲಿನ ಉದ್ಯೋಗಿಗಳಿಗೆ ಮುಂಚಿತ ನಿವೃತ್ತಿ ಅಥವಾ ಖರ್ಚು ಮಿತಗೊಳಿಸಲು ಯಾವುದೇ ಯೋಜನೆಗಳನ್ನು ಸರಕಾರ ಹೊಂದಿಲ್ಲ ಎಂದು ಕೇಂದ್ರ ಮಂಗಳವಾರ ಸ್ಪಷ್ಟಪಡಿಸಿದೆ.
ಸಚಿವಾಲಯದಡಿಯಲ್ಲಿನ ಸ್ವಾಯತ್ತ ಅಥವಾ ಸಾರ್ವಜನಿಕ ವಲಯದಲ್ಲಿ ನಾಗರಿಕ ವೈಮಾನಿಕ ಕ್ಷೇತ್ರದಲ್ಲಿ ಅಂದಾಜು 52,042 ನೌಕರರು ಕಾರ್ಯನಿರ್ವಹಿಸುತ್ತಿದ್ದಾರೆ. ಈ ವಲಯದಲ್ಲಿ ಇಂತಹ ಯಾವುದೇ ಪ್ರಸ್ತಾಪಗಳಿಲ್ಲ ಎಂದು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಪ್ರಫುಲ್ ಪಟೇಲ್ ರಾಜ್ಯ ಸಭೆಗೆ ತಿಳಿಸಿದ್ದಾರೆ.
ಉದ್ಯೋಗಿಗಳಿಗೆ ಸ್ವಯಂ ನಿವೃತ್ತಿ ಅಥವಾ ಖರ್ಚು ಮಿತಗೊಳಿಸುವ ಯಾವುದೇ ಯೋಜನೆಯನ್ನು ಸರಕಾರ ಹೊಂದಿದೆಯೇ ಎಂಬ ಪ್ರಶ್ನೆಯೊಂದಕ್ಕೆ ಅವರು ಲಿಖಿತ ಉತ್ತರದಲ್ಲಿ ಇದನ್ನು ತಿಳಿಸಿದ್ದಾರೆ.
ಸರಕಾರಿ ಸ್ವಾಮ್ಯದ ಏರ್ ಇಂಡಿಯಾ ವಿಮಾನಯಾನ ಸಂಸ್ಥೆಯು ಇತ್ತೀಚಿನ ವರ್ಷಗಳಲ್ಲಿ ಭಾರೀ ನಷ್ಟ ಅನುಭವಿಸುತ್ತಿರುವುದರಿಂದ ಸರಕಾರ ಹೊಸ ಕಾರ್ಯಯೋಜನೆಗಳನ್ನು ರೂಪಿಸುತ್ತಿದ್ದು, ಬದಲಾವಣೆ ಸಾಧ್ಯತೆಗಳಿವೆ ಎನ್ನಲಾಗಿತ್ತು.
ಮೂಲಗಳ ಪ್ರಕಾರ ಏರ್ ಇಂಡಿಯಾ ಆಡಳಿತ ಮಂಡಳಿಯಲ್ಲಿ ಮಹತ್ವದ ಬದಲಾವಣೆಗಳನ್ನು ಶೀಘ್ರದಲ್ಲೇ ಮಾಡಲಾಗುತ್ತದೆ. ಅಲ್ಲದೆ ಅನಗತ್ಯ ಖರ್ಚು ವೆಚ್ಚಗಳನ್ನು ಕಡಿಮೆ ಮಾಡುವತ್ತಲೂ ಸರಕಾರ ಗಮನ ಹರಿಸಲಿದೆ. ನಷ್ಟದಲ್ಲಿ ಸಾಗುತ್ತಿರುವ ದೇಶೀಯ ಮಾರ್ಗಗಳಲ್ಲಿನ ವೈಮಾನಿಕ ಸೇವೆಯನ್ನು ಕಡಿತಗೊಳಿಸುವ ಜತೆಗೆ, ಅನಗತ್ಯ ಸಿಬಂದಿಯನ್ನು ಕೈ ಬಿಡುವ ಯೋಚನೆಯೂ ಸರಕಾರದ್ದು ಎನ್ನಲಾಗಿದೆ.