ಇತ್ತೀಚಿನ ದುರ್ಬಲ ಡಾಲರ್ ಗತಿಯ ಲಾಭ ಪಡೆದ ತೈಲ ಮಾರುಕಟ್ಟೆಯು 10 ತಿಂಗಳುಗಳಲ್ಲೇ ಗರಿಷ್ಠ ಮಟ್ಟವನ್ನು ತಲುಪಿದೆ. ಆದರೆ ಇದು ತಾತ್ಕಾಲಿಕವಾಗಿರಬಹುದು ಎಂದು ವಿಶ್ಲೇಷಕರು ಎಚ್ಚರಿಸಿದ್ದಾರೆ.
ಸೆಪ್ಟೆಂಬರ್ ವಿತರಣೆಗಾಗಿನ ಬ್ರೆಂಟ್ ನಾರ್ತ್ ಸೀ ಕಚ್ಚಾ ತೈಲ ಬೆಲೆಯು ಪ್ರತೀ ಬ್ಯಾರೆಲ್‌ಗೆ 74.36 ಅಮೆರಿಕನ್ ಡಾಲರುಗಳನ್ನು ದಾಖಲಿಸಿದೆ. ಇದು ಕಳೆದ ವರ್ಷದ ಅಕ್ಟೋಬರ್ 15ರ ನಂತರದ ಗರಿಷ್ಠ ಬೆಲೆ.
ಈ ಹಿಂದಿನ ದಿನದ ದರಕ್ಕೆ 53 ಸೆಂಟ್ಸ್‌ಗಳನ್ನು ಸೇರಿಸಿಕೊಂಡ ಲಂಡನ್ ವ್ಯವಹಾರವು 74.08 ಡಾಲರುಗಳಿಗೇರುವ ಮೂಲಕ ದಿನದ ವಹಿವಾಟನ್ನು ಅಂತ್ಯಗೊಳಿಸಿತು.
ನ್ಯೂಯಾರ್ಕ್ ಪ್ರಮುಖ ಒಪ್ಪಂದ ಸೆಪ್ಟೆಂಬರ್ ವಿತರಣೆಗಾಗಿನ ಸಾದಾ ಕಚ್ಚಾ ತೈಲದಲ್ಲಿ ಒಂದು ಸೆಂಟ್ ಕುಸಿತವಾಗಿದೆ. ಇದರ ಪ್ರತೀ ಬ್ಯಾರೆಲ್ ಬೆಲೆಯೀಗ 71.57 ಡಾಲರುಗಳು. ನ್ಯೂಯಾರ್ಕ್ ಕಚ್ಚಾ ತೈಲವು ಜೂನ್ ನಂತರದ ಗರಿಷ್ಠ 72.20 ಡಾಲರುಗಳನ್ನು ನಿನ್ನೆಯಷ್ಟೇ ದಾಖಲಿಸಿತ್ತು.
ಹಣಕಾಸು ಮಾರುಕಟ್ಟೆಯಲ್ಲಿನ ಶಕ್ತಿಗಳಿಂದ ತೈಲ ಬೆಲೆಯು ಬೆಂಬಲ ಪಡೆದುಕೊಂಡಿದೆ ಎಂದು ಪರ್ವಿನ್ ಎಂಡ್ ಗೆರ್ಟ್ಜ್ ಸಂಸ್ಥೆಯ ಮುಖ್ಯಸ್ಥ ವಿಕ್ಟರ್ ಶಾಮ್ ಅಭಿಪ್ರಾಯಪಟ್ಟಿದ್ದಾರೆ.
ಈಗಾಗಿರುವ ಕಚ್ಚಾ ತೈಲ ಬೆಲೆಯ ಹೆಚ್ಚಳ ತೀರಾ ತಾತ್ಕಾಲಿಕ. ಮುಂದುವರಿಯುವಷ್ಟು ಪ್ರಬಲತೆ ಹೊಂದಿಲ್ಲ ಎಂದು ಅದೇ ಹೊತ್ತಿಗೆ ಮಾರುಕಟ್ಟೆ ವಿಶ್ಲೇಷಕರು ತಿಳಿಸಿದ್ದಾರೆ.