ದೇಶದಾದ್ಯಂತದ ಪ್ರಮುಖ ವಿಮಾನ ನಿಲ್ದಾಣಗಳನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಶೇರು ಮಾರುಕಟ್ಟೆಯಿಂದ ಆರ್ಥಿಕ ಬೆಂಬಲ ಪಡೆದುಕೊಳ್ಳುವ ಸಲುವಾಗಿ ಕಾನೂನಿಗೆ ತಿದ್ದುಪಡಿ ತಂದು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವನ್ನು ಕಂಪನಿಯನ್ನಾಗಿ ಪರಿವರ್ತಿಸುವ ಯೋಜನೆ ಸರಕಾರದ ಮುಂದಿದೆ ಎಂದು ನಾಗರಿಕ ವಿಮಾನಯಾನ ಖಾತೆ ಸಚಿವ ಪ್ರಫುಲ್ ಪಟೇಲ್ ತಿಳಿಸಿದ್ದಾರೆ.
ಪ್ರಸಕ್ತ ಪ್ರಾಧಿಕಾರವಾಗಿರುವ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವನ್ನು (ಎಎಐ) ನಾವು ಸಂಸ್ಥೆಯನ್ನಾಗಿಸಲಿದ್ದೇವೆ. ಶೇರು ಮಾರುಕಟ್ಟೆಯಲ್ಲಿ ಪ್ರಾಧಿಕಾರವನ್ನು ಪಟ್ಟಿ ಮಾಡುವುದೇ ನಮ್ಮ ಧ್ಯೇಯ ಎಂದು ಅವರು ಪತ್ರಕರ್ತರಿಗೆ ವಿವರಿಸಿದರು.
ವಿಮಾನ ನಿಲ್ದಾಣಗಳ ಆಡಳಿತ ಹೊಂದಿರುವ ಎಎಐ ಕಾಯಿದೆಯನ್ನು ತಿದ್ದುಪಡಿ ತರುವ ಮೂಲಕ ಇದನ್ನು ನೆರವೇರಿಸಲಾಗುತ್ತದೆ. ಆ ಮೂಲಕ ಮಾತೃ ಸಂಸ್ಥೆಯನ್ನು ಆರ್ಥಿಕವಾಗಿ ಸದೃಢಗೊಳಿಸುವುದು ನಮ್ಮ ಉದ್ದೇಶ ಎಂದು ಅವರು ತಿಳಿಸಿದ್ದಾರೆ.
ಪ್ರಾಧಿಕಾರವು ಕಂಪನಿಯಾಗಿ ಪರಿವರ್ತನೆಯಾದರೆ ಆರ್ಥಿಕ ವ್ಯವಹಾರಗಳು ತುಂಬಾ ಸುಲಭವಾಗುತ್ತವೆ. 2010ರ ಮಾರ್ಚ್ ತಿಂಗಳೊಳಗೆ ಈ ಸಂಬಂಧ ತಿದ್ದುಪಡಿ ಮಾಡಲಾಗುವುದು ಎಂದರು.
ವಿಮಾನ ನಿಲ್ದಾಣ ಆಧುನೀಕರಣಗೊಳಿಸುವಲ್ಲಿ ಪಾಲು ತೆಗೆದುಕೊಂಡಿರುವ ಖಾಸಗಿ ಮೂಲಭೂತ ಸೌಕರ್ಯ ವಲಯಗಳು ಕಂಪನಿಗಳಾಗಿ ಮಾರುಕಟ್ಟೆಯಲ್ಲಿದ್ದು, ಅತ್ಯುತ್ತಮ ಬೆಂಬಲ ಪಡೆದುಕೊಂಡಿವೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸುತ್ತಾ ಸಚಿವರು ತಿಳಿಸಿದ್ದಾರೆ.
ಕೊಲ್ಕತ್ತಾ ಮತ್ತು ಚೆನ್ನೈ ಹಾಗೂ 35 ಮೆಟ್ರೋರಹಿತ ವಿಮಾನನಿಲ್ದಾಣಗಳನ್ನು ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ಪ್ರಸಕ್ತ ಆಧುನೀಕರಣಗೊಳಿಸುತ್ತಿದೆ. ಇದು ದೇಶದಾದ್ಯಂತ ಜಮೀನು ಸೇರಿದಂತೆ ಭಾರೀ ಆಸ್ತಿ-ಪಾಸ್ತಿಗಳನ್ನು ಹೊಂದಿದೆ.