ಉನ್ನತ ಮಟ್ಟದ ಪೈಲಟ್‌ಗಳ ಗಂಭೀರ ಕೊರತೆ ಎದುರಿಸುತ್ತಿರುವ ಹೊರತಾಗಿಯೂ, ಏರ್ ಇಂಡಿಯಾ ತನ್ನ 42 ತರಬೇತು ಪೈಲಟ್‌ಗಳ ನೇಮಕಾತಿಯನ್ನು ರದ್ದು ಮಾಡಿದೆ.
170ರಷ್ಟು ವಲಸೆ ಪೈಲಟ್‌ಗಳನ್ನು ಒಪ್ಪಂದದ ಆಧಾರದಲ್ಲಿ ನೇಮಕ ಮಾಡಿಕೊಂಡಿರುವ ಏರ್ ಇಂಡಿಯಾವು, ಅವರನ್ನು ಕಮಾಂಡರ್‌ಗಳೆಂದು ಹಾರಾಟಕ್ಕೆ ಅನುಮತಿ ನೀಡಿರುವ ಹೊರತಾಗಿಯೂ ತರಬೇತು ಪೈಲಟ್‌ಗಳನ್ನು ಸೇವೆಗೆ ದಾಖಲಾತಿ ಮಾಡಿಕೊಳ್ಳದೇ ಇರುವುದು ಹುಬ್ಬೇರಿಸಿದೆ.
ಬೋಯಿಂಗ್ 787 ವಿಮಾನಗಳ ಬಟಾವಡೆಯು ವಿಳಂಬವಾಗುವ ಹಿನ್ನಲೆಯಲ್ಲಿ ನೇಮಕಾತಿ ಪ್ರಕ್ರಿಯೆಯನ್ನು ತಡೆ ಹಿಡಿಯಲಾಗಿದೆ ಎಂದು ವಿಮಾನಯಾನ ಸಂಸ್ಥೆಯು ಜುಲೈ 31ರಂದು ಕಳುಹಿಸಿರುವ ಇ-ಮೇಲ್ ಆದೇಶದಲ್ಲಿ ತಿಳಿಸಿದೆ.
ಈಗ ನೇಮಕಾತಿಯನ್ನು ತಡೆ ಹಿಡಿದಿರುವುದು ಬೋಯಿಂಗ್ 787 ವಿಮಾನಗಳ ಪೂರೈಕೆ ವಿಳಂಬವಾಗಿರುವ ಕಾರಣಕ್ಕಾಗಿ. ಆದರೆ ವಿಮಾನಯಾನ ಸಂಸ್ಥೆಯು 178 ವಲಸೆ ಪೈಲಟ್‌ಗಳಿಗಾಗಿ ಅಗಾಧ ಮೊತ್ತವನ್ನು ವೆಚ್ಚ ಮಾಡುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ನಿಜ ವಿಚಾರವೆಂದರೆ ನಾವೀಗ ಸಹ-ಪೈಲಟ್‌ಗಳ ಕೊರತೆ ಅನುಭವಿಸುತ್ತಿದ್ದೇವೆ. ಅಲ್ಲದೆ ಈ ಜಾಗಕ್ಕೆ ವಲಸೆ ಪೈಲಟ್‌ಗಳನ್ನು ನೇಮಕ ಮಾಡಿಕೊಳ್ಳಲು ನಾಗರಿಕ ವಿಮಾನಯಾನ ಮಹಾ ನಿರ್ದೇಶನಾಲಯವು ಅವಕಾಶ ನೀಡುವುದಿಲ್ಲ. ಸಹ-ಪೈಲಟ್‌ಗಳ ಕೊರತೆಯಿರುವುದರಿಂದ ವಲಸೆ ಪೈಲಟ್‌ಗಳು ಏರ್ ಇಂಡಿಯಾ ಎಕ್ಸ್‌ಪ್ರೆಸ್‌ನಲ್ಲಿ ಸಹ-ಪೈಲಟ್‌ಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ.
ವಲಸೆ ಪೈಲಟ್‌ವೊಬ್ಬನಿಗೆ ಪ್ರತಿ ತಿಂಗಳು 5.5 ಲಕ್ಷ ಮತ್ತು ಹೊಟೇಲು ವೆಚ್ಚವನ್ನು ನೀಡಲಾಗುತ್ತದೆ. ನೂತನ ಮೊದಲ ಅಧಿಕಾರಿಗಳಿಗಳಿಗಾದರೆ ತಿಂಗಳಿಗೆ ಆರಂಭದಲ್ಲಿ ಕೇವಲ ಒಂದು ಲಕ್ಷ ರೂಪಾಯಿ ನೀಡಿದರೆ ಸಾಕಾಗುತ್ತದೆ. ಹಾಗಾಗಿ ಇದು ಗಂಭೀರವಾದ ವಿಚಾರವಾಗಿದ್ದು, ಪರಾಮರ್ಶೆ ನಡೆಸಬೇಕಾಗಿದೆ ಎಂದು ಅವರು ಒತ್ತಾಯಿಸಿದ್ದಾರೆ.
ಈ ವರ್ಷದ ಆರಂಭದಲ್ಲಿ ತರಬೇತು ಪೈಲಟ್‌ಗಳ ನೇಮಕಾತಿ ಪ್ರಕ್ರಿಯೆ ಆರಂಭವಾಗಿತ್ತು. ಸುಮಾರು 1,300 ಅಭ್ಯರ್ಥಿಗಳು ಕೆಲಸಕ್ಕಾಗಿ ಅರ್ಜಿಯನ್ನೂ ಗುಜರಾಯಿಸಿದ್ದರು. ಅವರಲ್ಲಿ ಆಯ್ಕೆಯಾಗಿದ್ದು ಕೇವಲ 42 ಮಂದಿ ಮಾತ್ರ.
ನೇಮಕಾತಿಯನ್ನು ರದ್ದು ಮಾಡಲಾಗಿದೆ ಎಂಬ ವರದಿಗಳ ಬಗ್ಗೆ ಪ್ರತಿಕ್ರಿಯೆ ನೀಡಲು ನಿರಾಕರಿಸಿರುವ ಏರ್ ಇಂಡಿಯಾ ವಕ್ತಾರರು, ಇದು ಪುನರ್ರಚನಾ ಯೋಜನೆಯ ಒಂದು ಭಾಗವೆಂದಷ್ಟೇ ತಿಳಿಸಿದ್ದಾರೆ.