ದೇಶದ ಅತಿ ದೊಡ್ಡ ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ಭಾರತೀಯ ಸ್ಟೇಟ್ ಬ್ಯಾಂಕ್, ಅಟೋಮೊಬೈಲ್ ದೈತ್ಯ ಟಾಟಾ ಮೋಟಾರ್ಸ್, ಪೆಟ್ರೋಲಿಯಂ ಪ್ರಮುಖ ಇಂಡಿಯನ್ ಆಯಿಲ್ ಕಾರ್ಪೊರೇಷನ್, ಸಹರಾ ಇಂಡಿಯಾ ಮತ್ತು ಅದರ ಪ್ರವರ್ತಕ ಸುಬ್ರತೋ ರಾಯ್ ಸೇರಿದಂತೆ ದೇಶದ ಬೃಹತ್ ಕಂಪನಿಗಳು ಸರಕಾರಕ್ಕೆ ಸುಮಾರು 1.41 ಲಕ್ಷ ಕೋಟಿ ರೂಪಾಯಿಗಳ ತೆರಿಗೆ ಬಾಕಿ ಉಳಿಸಿಕೊಂಡಿವೆ.
ವಿತ್ತ ಖಾತೆಯ ರಾಜ್ಯ ಸಚಿವ ಎಸ್.ಎಸ್. ಪಳನಿಮನಿಕ್ಕಮ್ ಮಂಗಳವಾರ ರಾಜ್ಯಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಬಾಕಿದಾರರ ಪಟ್ಟಿ ಬಹಿರಂಗಪಡಿಸಿದ್ದಾರೆ.
ತೆರಿಗೆ ಬಾಕಿ ಉಳಿಸಿಕೊಂಡಿರುವ ಅಗ್ರ 100 ಪಟ್ಟಿಯನ್ನು ಅವರು ಪ್ರಕಟಿಸಿದ್ದು, ಸರಕಾರದ ಬೊಕ್ಕಸಕ್ಕೆ 1.41 ಲಕ್ಷ ಕೋಟಿ ರೂಪಾಯಿಗಳು ಬರಬೇಕಿದೆ. ಬಡತನ ರೇಖೆಗಿಂತ ಕೆಳಗಿರುವ ಕುಟುಂಬಕ್ಕೆ ಉದ್ಯೋಗ ಒದಗಿಸುವ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ಎನ್‌ಆರ್‌ಇಜಿಎ)ಗೆ ಸರಕಾರವು ವಾರ್ಷಿಕ ವೆಚ್ಚ ಮಾಡುವ ಮೊತ್ತಕ್ಕಿಂತಲೂ ಇದು ಮೂರು ಪಟ್ಟು ಹೆಚ್ಚು.
ಮಿತಿ ಮೀರಿದ ಬಾಕಿ ವಸೂಲಿಗೆ ಕೇಂದ್ರವು ಹಲವು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದು ವಿವರಿಸಿರುವ ಸಚಿವರು, ನ್ಯಾಯಮೂರ್ತಿಗಳನ್ನೊಳಗೊಂಡ ಪ್ರಾಧಿಕಾರಗಳಾದ ಐಟಿಎಟಿ ಮತ್ತು ಇತ್ಯರ್ಥ ಆಯೋಗಗಳು ಪ್ರಕರಣಗಳನ್ನು ವಿಧಿವತ್ತಾಗಿ ವಿಲೇವಾರಿ ಮಾಡಬೇಕೆಂದು ಸರಕಾರ ಮನವಿ ಮಾಡಿಕೊಂಡಿದೆ ಎಂದರು.
ಈ ಪಟ್ಟಿಯ ಪ್ರಕಾರ ಪದಚ್ಯುತ ಕುದುರೆ ಲಾಯದ ಮಾಲಿಕ ಹಸನ್ ಆಲಿ ಖಾನ್ ಅಗ್ರ ಸ್ಥಾನದಲ್ಲಿದ್ದು, ಅವರು 50,000 ಕೋಟಿ ರೂಪಾಯಿಗಳಿಗೂ ಮಿಕ್ಕಿದ ತೆರಿಗೆ ಬಾಕಿ ಉಳಿಸಿಕೊಂಡಿದ್ದಾರೆ.
ಶೇರು ದಲ್ಲಾಳಿ ದಿವಂಗತ ಹರ್ಷದ್ ಮೆಹ್ತಾ ಮತ್ತು ಅವರ ಜತೆಗಾರರು ಹಾಗೂ ಇತರ ದಲ್ಲಾಳಿಗಳಾದ ಎ.ಡಿ. ನರೋಟಮ್ ಮತ್ತು ಹಿತೇನ್ ದಲಾಲ್ ಕೂಡ ಈ ಪಟ್ಟಿಯ ಅಗ್ರ 100ರೊಳಗೆ ಸ್ಥಾನ ಪಡೆದಿದ್ದಾರೆ.
ಭಾರತೀಯ ಸ್ಟೇಟ್ ಬ್ಯಾಂಕ್ 333.6 ಕೋಟಿ, ಟಾಟಾ ಮೋಟಾರ್ಸ್ 206.5 ಕೋಟಿ, ಇಂಡಿಯನ್ ಆಯಿಲ್ ಕಾರ್ಪೊರೇಷನ್ 210.3 ಕೋಟಿ, ಸಹರಾ ಸಂಸ್ಥೆಗಳ ಸಮೂಹದ ಮಾಲಕ ಸುಬ್ರತೋ ರಾಯ್ 230 ಕೋಟಿ ರೂಪಾಯಿ ತೆರಿಗೆಗಳನ್ನು ಬಾಕಿ ಉಳಿಸಿಕೊಂಡಿದ್ದಾರೆ.
ಸಾರ್ವಜನಿಕ ಸ್ವಾಮ್ಯದ ಬಿಎಸ್‌ಎನ್‌ಎಲ್ 2,417 ಕೋಟಿ, ಎನ್‌ಟಿಪಿಸಿ 622 ಕೋಟಿ, ಈಗ ಟಾಟಾ ಕಮ್ಯುನಿಕೇಶನ್ಸ್ ಲಿಮಿಟೆಡ್ ಆಗಿರುವ ವಿಎಸ್‌ಎನ್‌ಎಲ್ ಲಿಮಿಟೆಡ್ 505.5 ಕೋಟಿ ತೆರಿಗೆ ಬಾಕಿ ಉಳಿಸಿವೆ ಎಂದು ಸರಕಾರ ತಿಳಿಸಿದೆ.
ಕೋಕಾ ಕೋಲಾ ಇಂಡಿಯಾ 600 ಕೋಟಿ, ಬರೋನ್ ಇಂಟರ್‌ನ್ಯಾಷನಲ್ 589 ಕೋಟಿ, ಒರೆಕಲ್ ಕಾರ್ಪೊರೇಷನ್ 558 ಕೋಟಿ, ರಾಲೆಕ್ಸ್ ಹೋಲ್ಡಿಂಗ್ ಲಿಮಿಟೆಡ್ 558 ಕೋಟಿ, ಆದಿತ್ಯಾ ಲಕ್ಯ್ಸೂರಿ ಹೊಟೇಲ್ಸ್ 564 ಕೋಟಿ, ರಿಲಯೆನ್ಸ್ ಎನರ್ಜಿ 176 ಕೋಟಿ ತೆರಿಗೆ ಕಟ್ಟಿಲ್ಲ.
ಅಲ್ಲದೆ ನೋಕಿಯಾ, ದೇವೂ ಮೋಟಾರ್ಸ್, ಬಂಜ್ ಇಂಡಿಯಾ ಲಿಮಿಟೆಡ್, ಟಾಟಾ ಇಂಡಸ್ಟ್ರೀಸ್, ಸತ್ಯಂ ಕಂಪ್ಯೂಟರ್ಸ್ ಮತ್ತು ಐಬಿಎಂ ಪ್ರೈವೆಟ್ ಲಿಮಿಟೆಡ್ ಕಂಪನಿಗಳು ಸೇರಿದಂತೆ ಹಲವಾರು ಕಾರ್ಪೊರೇಟ್‌ಗಳು ತೆರಿಗೆ ಬಾಕಿದಾರರ ಪಟ್ಟಿಯಲ್ಲಿ ಸ್ಥಾನ ಪಡೆದಿವೆ.