ಇನ್ಫೋಸಿಸ್ ಸಂಸ್ಥಾಪಕರಲ್ಲೊಬ್ಬರಾದ ನಂದನ್ ನಿಲೇಕಣಿಯವರಿಂದ ತೆರವಾದ ಸಂಸ್ಥೆಯ ಸಹಾಧ್ಯಕ್ಷ ಸ್ಥಾನಕ್ಕೆ ತಕ್ಷಣಕ್ಕೆ ಯಾರನ್ನೂ ನೇಮಕ ಮಾಡುವ ಯೋಜನೆಯಿಲ್ಲ ಎಂದು ಕಂಪನಿ ತಿಳಿಸಿದೆ.
ನಿಲೇಕಣಿಯವರು ಇತ್ತೀಚೆಗಷ್ಟೇ ರಾಷ್ಟ್ರೀಯ ಗುರುತಿನ ಚೀಟಿ ಯೋಜನೆ ಪ್ರಾಧಿಕಾರದ ಅಧ್ಯಕ್ಷರಾಗಿ ಪ್ರಧಾನಮಂತ್ರಿ ಮನಮೋಹನ್ ಸಿಂಗ್‌ರಿಂದ ನೇಮಕಗೊಂಡಿದ್ದರು. ಈ ಹಿನ್ನಲೆಯಲ್ಲಿ ಅವರು ಇನ್ಫೋಸಿಸ್‌ನಲ್ಲಿ ಹೊಂದಿದ್ದ ಜವಾಬ್ದಾರಿಗೆ ರಾಜಿನಾಮೆ ಸಲ್ಲಿಸಿದ್ದರು.
ಸಿಐಐ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಇನ್ಫೋಸಿಸ್ ಕಾರ್ಯನಿರ್ವಾಹಕಧಿಕಾರಿ ಕ್ರಿಸ್ ಗೋಪಾಲಕೃಷ್ಣನ್ ಪತ್ರಕರ್ತರೊಂದಿಗೆ ಮಾತನಾಡುತ್ತಾ, ತೆರವಾಗಿರುವ ಸಹಾಧ್ಯಕ್ಷ ಸ್ಥಾನವನ್ನು ತುಂಬುವ ಬಗ್ಗೆ ಯಾವುದೇ ಯೋಚನೆ ಮಾಡಿಲ್ಲ ಎಂದಿದ್ದಾರೆ.
ಜೂನ್ ತಿಂಗಳಾಂತ್ಯಕ್ಕೆ ಕೊನೆಗೊಂಡಿದ್ದ ಮೊದಲ ತ್ರೈಮಾಸಿಕ ಅವಧಿಯ ವರದಿಯಲ್ಲಿ ಇನ್ಫೋಸಿಸ್ ಶೇಕಡಾ 17.3ರ ಲಾಭ ದಾಖಲಿಸಿತ್ತು. ಕಂಪನಿ ಲಾಭದಲ್ಲಿರುವುದರಿಂದ ಈ ವರ್ಷ 18,000 ಉದ್ಯೋಗಿಗಳನ್ನು ನೇಮಿಸಿಕೊಳ್ಳುವ ನಿರ್ಧಾರಕ್ಕೆ ಬದ್ಧವಾಗಿದೆ ಎಂದೂ ಕ್ರಿಸ್ ಸ್ಪಷ್ಟಪಡಿಸಿದ್ದಾರೆ.
ಅದೇ ಹೊತ್ತಿಗೆ ಮುಂದಿನ ವರ್ಷದ ಕ್ಯಾಂಪಸ್ ನೇಮಕಾತಿಯು ಆಗಿನ ಪರಿಸ್ಥಿತಿಯನ್ನು ಹೊಂದಿಕೊಂಡಿದೆ ಎಂಬುದನ್ನು ಗೋಪಾಲಕೃಷ್ಣನ್ ಒತ್ತಿ ಹೇಳಿದ್ದಾರೆ.