ವಿಮಾನವಾಹಕ ಪರಮಾಣು ನೌಕೆ ನಿರ್ಮಿಸುವ ಸಾಮರ್ಥ್ಯ ಭಾರತಕ್ಕಿದೆ
ಮುಂಬೈ, ಬುಧವಾರ, 5 ಆಗಸ್ಟ್ 2009( 19:19 IST )
ಭಾರತವು ವಿಮಾನವಾಹಕ ಪರಮಾಣು ಇಂಧನ ಚಾಲಿತ ನೌಕೆ ಮತ್ತು ಯುದ್ಧ ನೌಕೆಗಳನ್ನು ತಯಾರಿಸುವ ತಂತ್ರಜ್ಞಾನ ಪರಿಣತಿ ಮತ್ತು ಸಾಮರ್ಥ್ಯವನ್ನು ಹೊಂದಿದೆ ಎಂದು ಇತ್ತೀಚೆಗಷ್ಟೇ ರಾಷ್ಟ್ರದ ಮೊದಲ ಸ್ವದೇಶಿ ಪರಮಾಣು ಇಂಧನ ಚಾಲಿತ ಜಲಾಂತರ್ಗಾಮಿ ನೌಕೆಯನ್ನು ನಿರ್ಮಿಸಿದ ನಂತರ ಪರಮಾಣು ಶಕ್ತಿ ಆಯೋಗದ ಅಧ್ಯಕ್ಷ ಅನಿಲ್ ಕಾಕೋಡ್ಕರ್ ತಿಳಿಸಿದ್ದಾರೆ.
"ಅಂತಾರಾಷ್ಟ್ರೀಯ ಮಟ್ಟದ ವಿಮಾನವಾಹಕ ಅಣು ಇಂಧನ ಚಾಲಿತ ನೌಕೆ ಮತ್ತು ಯುದ್ಧ ಹಡಗುಗಳನ್ನು ನಿರ್ಮಿಸುವ ತಾಂತ್ರಿಕ ನೈಪುಣ್ಯತೆ ಮತ್ತು ಸಾಮರ್ಥ್ಯವನ್ನು ನಾವು ಹೊಂದಿದ್ದೇವೆ" ಎಂದು ಕಳೆದ ರಾತ್ರಿ ಇಲ್ಲಿ ನಡೆದ ಕಾರ್ಯಕ್ರಮದ ನಂತರ ಮಾತನಾಡುತ್ತಾ ಕಾಕೋಡ್ಕರ್ ತಿಳಿಸಿದರು.
ಸರಕಾರವು ಇಂತಹ ಹಡಗುಗಳನ್ನು ನಿರ್ಮಿಸಲು ತಿಳಿಸಿದರೆ ನಾವು ಸಿದ್ಧರಿದ್ದೇವೆ.. ಅಣು ಇಂಧನ ಬಳಸುವ ವಿಮಾನವಾಹಕ ನೌಕೆಗಳನ್ನು ತಯಾರಿಸುವ ಬಗ್ಗೆ ನಾವು ಆತ್ಮವಿಶ್ವಾಸ ಹೊಂದಿದ್ದೇವೆ ಎಂದರು.
ಕಳೆದ ತಿಂಗಳು ಪ್ರಧಾನ ಮಂತ್ರಿ ಮನಮೋಹನ್ ಸಿಂಗ್ 'ಐಎನ್‌ಎಸ್ ಅರಿಹಂತ್' ಅಣು ಇಂಧನ ಚಾಲಿತ ಜಲಾಂತರ್ಗಾಮಿ ಸ್ವದೇಶಿ ನೌಕೆಯನ್ನು ದೇಶಕ್ಕೆ ಸಮರ್ಪಿಸಿದ ನಂತರ ಮಾತನಾಡುತ್ತಾ, ಸರಕಾರವು ಇಂತಹ ಇನ್ನಷ್ಟು ಸಬ್‌ಮೆರಿನ್‌ಗಳನ್ನು ಅಭಿವೃದ್ಧಿಪಡಿಸಲು ಆಸಕ್ತಿ ಹೊಂದಿದೆ ಎಂದಿದ್ದರು.
ಅಣು ಇಂಧನ ಚಾಲಿತ ಜಲಾಂತರ್ಗಾಮಿ ಸ್ವದೇಶಿ ನೌಕೆಯನ್ನು ಭಾರತ ನಿರ್ಮಿಸುವುದರೊಂದಿಗೆ ಈ ವ್ಯವಸ್ಥೆಯನ್ನು ಹೊಂದಿದ ವಿಶ್ವದ ಆರನೇ ರಾಷ್ಟ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ಆ ಮೂಲಕ ಅಣು ಇಂಧನ ಚಾಲಿತ ಜಲಾಂತರ್ಗಾಮಿ ನೌಕೆ ಹೊಂದಿರುವ ಅಮೆರಿಕಾ, ರಷ್ಯಾ, ಫ್ರಾನ್ಸ್, ಬ್ರಿಟನ್ ಮತ್ತು ಚೀನಾ ಸಾಲಿಗೆ ಭಾರತ ಸೇರಿಕೊಂಡಿತ್ತು.