ದುರ್ಬಲ ಡಾಲರ್ ಹಿನ್ನಲೆಯಲ್ಲಿ ರಾತ್ರೋರಾತ್ರಿ ಗರಿಷ್ಠ ಮಟ್ಟಕ್ಕೇರಿದ್ದ ಕಚ್ಚಾ ತೈಲ ಬೆಲೆಯು ಗುರುವಾರ ಏಷಿಯನ್ ಮಾರುಕಟ್ಟೆಯಲ್ಲಿ ಹಿನ್ನಡೆ ದಾಖಲಿಸಿದೆ.
ನ್ಯೂಯಾರ್ಕ್ ಪ್ರಮುಖ ಒಪ್ಪಂದದ ಸೆಪ್ಟೆಂಬರ್ ವಿತರಣೆಯ ಸಾದಾ ಕಚ್ಚಾ ತೈಲದಲ್ಲಿ 32 ಸೆಂಟ್ಸ್‌ಗಳ ಕುಸಿತ ಕಂಡಿದ್ದು, 71.65 ಡಾಲರುಗಳನ್ನು ಪ್ರತಿ ಬ್ಯಾರೆಲ್‌ಗೆ ವ್ಯವಹರಿಸಿದೆ.
ಬ್ರೆಂಟ್ ನಾರ್ತ್ ಸೀ ಕಚ್ಚಾ ತೈಲದ ಸೆಪ್ಟೆಂಬರ್ ವಿತರಣೆಯು 37 ಸೆಂಟ್ಸ್‌ಗಳ ಕುಸಿತ ದಾಖಲಿಸಿ ಪ್ರತೀ ಬ್ಯಾರೆಲ್ ತೈಲಕ್ಕೆ 75.14 ಡಾಲರುಗಳಲ್ಲಿ ಸ್ಥಿರವಾಗಿದೆ.
ಅಮೆರಿಕನ್ ಡಾಲರ್ ದುರ್ಬಲತೆ ಹಿನ್ನಲೆಯಲ್ಲಿ ಹೂಡಿಕೆದಾರರು ತೈಲ ಸೇರಿದಂತೆ ಕೈಗಾರಿಕಾ ಉತ್ಪನ್ನಗಳತ್ತ ವಾಪಸಾದ ಹಿನ್ನಲೆಯಲ್ಲಿ ಎರಡೂ ಒಪ್ಪಂದಗಳು ಗರಿಷ್ಠ ಮೌಲ್ಯದೊಂದಿಗೆ ನಿನ್ನೆ ವ್ಯವಹಾರ ಅಂತ್ಯಗೊಳಿಸಿದ್ದವು.
ಕಚ್ಚಾ ತೈಲ ವ್ಯವಹಾರಗಳು ಅಮೆರಿಕನ್ ಕರೆನ್ಸಿಯಲ್ಲಿ ನಡೆಯುತ್ತಿರುವಾಗ ಡಾಲರ್ ಮೌಲ್ಯ ಕುಸಿದು ತೀರಾ ಸಪ್ಪೆಯೆನಿಸಿತ್ತು.
1.40 ಅಮೆರಿಕನ್ ಡಾಲರ್ ಮೌಲ್ಯ ಹೊಂದಿದ್ದ ಯೂರೋ 1.44 ಡಾಲರ್‌ಗಳಿಗೇರಿತ್ತು. ಇದು ಕಳೆದ ಡಿಸೆಂಬರ್ ನಂತರದ ಗರಿಷ್ಠ ಮೌಲ್ಯ. ಬುಧವಾರ ತಡರಾತ್ರಿಯ ವ್ಯವಹಾರದಲ್ಲಿ ಅಮೆರಿಕನ್ ಮಾರುಕಟ್ಟೆಯು 1.4411 ಡಾಲರುಗಳಲ್ಲಿ ಯೂರೋ ವ್ಯವಹಾರವನ್ನು ಅಂತ್ಯಗೊಳಿಸಿತು.
ತೈಲ ಬೆಲೆಯೇರಿಕೆಯಿಂದಾಗಿ ಅಮೆರಿಕನ್ ಡಾಲರ್ ಕರೆನ್ಸಿ ಒತ್ತಡಕ್ಕೊಳಗಾಗಿದ್ದು, ಶೀಘ್ರದಲ್ಲೇ ತಿರುಗಿ ಬೀಳುವ ನಿರೀಕ್ಷೆ ನಮ್ಮದು ಎಂದು ಲಂಡನ್ ಮೂಲದ ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.