ಇತ್ತೀಚೆಗಷ್ಟೇ ಅಸ್ತಿತ್ವಕ್ಕೆ ಬಂದಿದ್ದ ಸಂಘಟನೆಯೊಂದಕ್ಕೆ ಸೇರಿಕೊಂಡ ಕಾರಣವನ್ನು ನೀಡಿ ಜೆಟ್ ಏರ್‌ವೇಸ್ ಖಾಸಗಿ ವಿಮಾನಯಾನ ಸಂಸ್ಥೆಯು ತನ್ನಿಬ್ಬರು ಪೈಲಟ್‌ಗಳನ್ನು ಸೇವೆಯಿಂದ ವಜಾ ಮಾಡಿದೆ.
ಮುಂಬೈಯಲ್ಲಿನ ಕಾರ್ಮಿಕ ಆಯುಕ್ತರಲ್ಲಿ ಕಳೆದ ತಿಂಗಳು ನೋಂದಣಿ ಮಾಡಿಸಿಕೊಂಡಿದ್ದ ಪೈಲಟ್‌ಗಳ ಸಂಘಟನೆ 'ನ್ಯಾಷನಲ್ ಏವಿಯೇಟರ್ಸ್ ಗಿಲ್ಡ್'ಗೆ ಸೇರಿಕೊಂಡಿದ್ದ ಬಲರಾಮನ್ ಮತ್ತು ಸ್ಯಾಮ್ ಥಾಮಸ್ ಎಂಬವರೇ ವಜಾಗೊಂಡವರು.
ಈ ಇಬ್ಬರು ಪೈಲಟ್‌ಗಳನ್ನು ಕಳೆದ ವಾರವೇ ಕೆಲಸ ಬಿಡುವಂತೆ ಸೂಚಿಸಲಾಗಿತ್ತು. ಇದು ನಮ್ಮ ಖರ್ಚು-ವೆಚ್ಚ ನಿಯಂತ್ರಣ ಅಥವಾ ಪುನರ್‌ರಚನೆಯ ಭಾಗವಲ್ಲ ಎಂದು ವಿಮಾನಯಾನ ಸಂಸ್ಥೆಯ ವಕ್ತಾರರು ತಿಳಿಸಿದ್ದಾರೆ.
ಈ ವಿಚಾರದ ಬಗ್ಗೆ ಹೆಚ್ಚು ವಿವರಗಳನ್ನು ನೀಡಲು ನಿರಾಕರಿಸಿರುವ ಸಂಸ್ಥೆ, ಇದು ನಮ್ಮ ಆಂತರಿಕ ವಿಷಯವಾಗಿದ್ದು, ಸಾರ್ವಜನಿಕವಾಗಿ ಚರ್ಚಿಸಲು ಹೋಗುವುದಿಲ್ಲ ಎಂದಿದ್ದಾರೆ.
ವೆಚ್ಚ ನಿಯಂತ್ರಣ ಹಾದಿಯಲ್ಲಿದ್ದ ಜೆಟ್ 2008ರ ನವೆಂಬರ್‌ನಲ್ಲಿ 32 ವಿದೇಶಿ ಪೈಲಟ್‌ಗಳನ್ನು ವಜಾಗೊಳಿಸಿತ್ತು. ಇದೀಗ ವಜಾಗೊಂಡಿರುವ ಇಬ್ಬರು ಪೈಲಟ್‌ಗಳು ಸಂಘಟನೆಯ 600ಕ್ಕೂ ಸದಸ್ಯರ ಬೆಂಬಲ ಹೊಂದಿದ್ದಾರೆ ಎಂದು ಯೂನಿಯನ್ ಅಧಿಕಾರಿಗಳು ತಿಳಿಸಿದ್ದಾರೆ.
ಅವರನ್ನು ಮರಳಿ ಸೇವೆಗೆ ಪರಿಗಣಿಸದಿದ್ದರೆ ಕೆಲವೇ ದಿನಗಳಲ್ಲಿ ಸಂಸ್ಥೆಯ ವಿರುದ್ಧ ಪ್ರತಿಭಟನೆ ನಡೆಸುವ ತೀರ್ಮಾಕ್ಕೂ ಪೈಲಟ್‌ಗಳು ಬರಲಿದ್ದಾರೆ ಎಂದೂ ಮೂಲಗಳು ತಿಳಿಸಿವೆ.