ಕೊನೆಗೂ ಅಮೆರಿಕಾದಲ್ಲಿ ಉದ್ಯೋಗ ನಷ್ಟದ ಪ್ರಮಾಣ ಕಡಿಮೆಯಾಗತೊಡಗಿದೆ. ಅಲ್ಲಿನ ಸರಕಾರ ನೀಡಿರುವ ವರದಿ ಪ್ರಕಾರ ಕಳೆದ ಒಂಬತ್ತು ತಿಂಗಳಿನಲ್ಲೇ ಅತೀ ಕಡಿಮೆ ನೌಕರಿ ಕಳೆದುಕೊಂಡ ತಿಂಗಳು ಜುಲೈ ಎಂದು ತಿಳಿಸಿದೆ. ಇದರೊಂದಿಗೆ ಕಾರ್ಮಿಕ ಮಾರುಕಟ್ಟೆಯು ಚೇತರಿಸುತ್ತಿರುವ ಮುನ್ಸೂಚನೆಯೂ ಲಭಿಸಿದಂತಾಗಿದೆ.
ಖಾಸಗಿ ವಲಯದಲ್ಲಿ ಜುಲೈ ತಿಂಗಳಲ್ಲಿ 3,71,000 ಉದ್ಯೋಗ ನಷ್ಟವಾಗಿದೆ ಎಂದು ಅಮೆರಿಕಾದ ಎಡಿಪಿ ರಾಷ್ಟ್ಟೀಯ ಉದ್ಯೋಗ ವರದಿ ತಿಳಿಸಿದೆ.
ಒಂದು ಅಂದಾಜು ಮಾಹಿತಿಯ ಪ್ರಕಾರ ಮೇ ತಿಂಗಳಿನಿಂದ ಜೂನ್‌ವರೆಗೆ 10,000 ನೌಕರಿ ಕಡಿತ ಕಡಿಮೆಯಾಗಿರುವುದು ಕಂಡು ಬಂದಿತ್ತು. ಮೇ ತಿಂಗಳಲ್ಲಿ 4,73,000ವಿದ್ದದ್ದು, 4,63,000ಕ್ಕೆ ತಲುಪಿತ್ತು.
ಈ ವರದಿಯ ಪ್ರಕಾರ ಉದ್ಯೋಗ ಕಡಿತದಲ್ಲಿ ಇಷ್ಟು ಕಡಿಮೆ ಪ್ರಮಾಣ ದಾಖಲಾಗಿರುವುದು 2008ರ ಅಕ್ಟೋಬರ್ ನಂತರ ಇದೇ ಮೊದಲು. ಇದೀಗ ಆರ್ಥಿಕ ಸ್ಥಿರತೆಯ ಮುನ್ಸೂಚನೆಗಳು ಲಭಿಸುತ್ತಿದ್ದ ಹೊರತಾಗಿಯೂ ಮುಂದಿನ ತಿಂಗಳುಗಳಲ್ಲಿ ಇನ್ನಷ್ಟು ನೌಕರಿ ನಷ್ಟವಾಗಬಹುದು ಎಂದು ಅಂದಾಜಿಸಲಾಗಿದೆ.
ಜುಲೈ ತಿಂಗಳಲ್ಲಿ ಸೇವಾ ಪೂರೈಕೆದಾರರ ಕ್ಷೇತ್ರವು 202,000, ಸರಕು-ಉತ್ಪಾದನಾ ಕ್ಷೇತ್ರವು 169,000 ಹಾಗೂ ತಯಾರಿಕಾ ಕ್ಷೇತ್ರವು 99,000 ನೌಕರಿ ನಷ್ಟ ಅನುಭವಿಸಿತ್ತು ಎಂದು ವರದಿ ವಿವರಿಸಿದೆ.
ಮತ್ತೊಂದು ವರದಿಯ ಪ್ರಕಾರ ಅಮೆರಿಕಾದಲ್ಲಿನ ಉದ್ಯೋಗ ನಷ್ಟದ ಪ್ರಮಾಣ ಜುಲೈ ತಿಂಗಳಲ್ಲಿ ಶೇ.31ರಷ್ಟು ಹೆಚ್ಚಳವಾಗಿದೆ. ಉದ್ಯೋಗದಾತರು 97,000 ನೌಕರರನ್ನು ಕೈ ಬಿಟ್ಟಿದ್ದು, ಇದು ಕಳೆದ ಆರು ತಿಂಗಳ ನಂತರ ಮೊದಲನೇ ಬಾರಿ ಹೀಗಾಗಿದೆ ಎಂದು ವರದಿ ತಿಳಿಸಿದೆ.