ಆಹಾರ ವಸ್ತುಗಳ ಬೆಲೆ ಗರಿಷ್ಠ ಮಟ್ಟದಲ್ಲೇ ಮುಂದುವರಿದಿರುವ ಹೊರತಾಗಿಯೂ ಹಣದುಬ್ಬರ ದರವು ತನ್ನ ಋಣಾತ್ಮಕ ನಡೆಯನ್ನು ಸತತ ಎಂಟನೇ ವಾರಕ್ಕೆ ವಿಸ್ತರಿಸಿದೆ. ಜುಲೈ 25ಕ್ಕೆ ಕೊನೆಗೊಂಡ ವಾರದಲ್ಲಿ ಆಂಶಿಕ ಕುಸಿತ ಕಂಡಿರುವ ಸಗಟು ಸೂಚ್ಯಂಕ ದರವನ್ನಾದರಿಸಿದ ಹಣದುಬ್ಬರವೀಗ ಶೇಕಡಾ (-)1.58ರಲ್ಲಿದೆ.
ಆಹಾರ ವಸ್ತುಗಳಾದ ಕಡಲ ಮೀನು, ಧಾನ್ಯಗಳು, ಫಲವಸ್ತುಗಳು ಮತ್ತು ತರಕಾರಿ, ನೆಲಗಡಲೆ ಎಣ್ಣೆ ಮತ್ತು ಸಕ್ಕರೆ ದುಬಾರಿಯಾಗಿದ್ದರೂ ಹಣದುಬ್ಬರ ದರದಲ್ಲಿ ಯಾವುದೇ ಸುಧಾರಣೆ ಕಂಡಿಲ್ಲ. ಬದಲಿಗೆ ಕಳೆದ ವಾರ ದಾಖಲಿಸಿದ್ದ (-)1.54ಕ್ಕಿಂತ ಶೇಕಡಾ 0.04ರ ಹಿನ್ನಡೆ ಕಂಡು ಮೈನಸ್ 1.54ಕ್ಕೆ ಕುಸಿತ ಕಂಡಿದೆ.
ಮೊಟ್ಟೆ, ಸೋಯಾಬೀನ್, ಗಾಣದ ಹಿಂಡಿ ಮತ್ತು ಆಮದು ಖಾದ್ಯ ತೈಲಗಳು ಪ್ರಸಕ್ತ ವಾರದಲ್ಲಿ ಅಗ್ಗವೆನಿಸಿದ್ದವು. ಇಂಧನ, ವಿದ್ಯುತ್ ಮತ್ತು ಲೈಟ್ ಹಾಗೂ ಕೀಲೆಣ್ಣೆಗಳು ಅದಕ್ಕಿಂತ ಹಿಂದಿನ ವಾರದಲ್ಲಿದ್ದ ದರಗಳನ್ನೇ (338.2) ಕಾಪಾಡಿಕೊಂಡಿವೆ.
ಆವಶ್ಯಕ ವಸ್ತುಗಳ ಸೂಚ್ಯಂಕವು ಶೇ.0.4ರ ಏರಿಕೆ ಕಂಡಿದ್ದು 261.1ರಿಂದ 262.2ಕ್ಕೆ ತಲುಪಿತ್ತು. ಉತ್ಪಾದನಾ ವಸ್ತುಗಳಲ್ಲಿ ಶೇ.0.1ರ ಕುಸಿತ ದಾಖಲಾಗಿದೆ.
ಈ ಮೊದಲು ಹಣದುಬ್ಬರ ದರವು ಋಣಾತ್ಮಕ ಕ್ಷೇತ್ರವನ್ನು ಪ್ರವೇಶಿಸಿದ್ದು 1977ರಲ್ಲಿ. 1995ರಲ್ಲಿ ಸಗಟು ಸೂಚ್ಯಂಕ ದರವನ್ನಾಧರಿಸಿದ ಹಣದುಬ್ಬರ ದರ ಜಾರಿಯಾದ ನಂತರ ಪ್ರಪ್ರಥಮ ಬಾರಿಗೆ ಜೂನ್ 6ರಂದು ಹಣದುಬ್ಬರ ದರವು ಋಣಾತ್ಮಕ ವಲಯವನ್ನು ಪ್ರವೇಶಿಸಿತ್ತು. ಆ ನಂತರ ಸತತ ಎಂಟು ವಾರಗಳಿಂದ ಅದೇ ವಲಯದಲ್ಲಿ ತಿಣುಕಾಡುತ್ತಿದೆ.