ಅತೀ ಹೆಚ್ಚು ಮೊಬೈಲ್ ಬಳಸುವವರು, ಮೊಬೈಲ್ ಬಿಟ್ಟಿರಲಾರದೆ ಇರುವವರಿಗೆ ನೆನಪಿನ ಶಕ್ತಿ ಕಡಿಮೆಯಾಗತ್ತಂತೆ. ಅಲ್ಲದೆ ಪ್ರತಿಕ್ರಿಯಿಸುವ ಸಂದರ್ಭದಲ್ಲಿ ತೀರಾ ನಿಧಾನಗತಿಯನ್ನು ಅವರು ಅನುಸರಿಸುವುದು ಮತ್ತು ಹೆಚ್ಚು ತಪ್ಪುಗಳನ್ನು ಕೂಡ ಮಾಡುತ್ತಾರೆಂದು ಹೊಸ ಸಂಶೋಧನೆ ಬಹಿರಂಗಪಡಿಸಿದೆ.
ಈ ನಿರ್ಧಾರಕ್ಕೆ ಬರುವ ಮೊದಲು ಮೊನಾಶ್ ಯುನಿವರ್ಸಿಟಿಯ ಅಧ್ಯಯನಕಾರರು ಮೆಲ್ಬೋರ್ನ್‌ನಲ್ಲಿನ ಸುಮಾರು 20 ಖಾಸಗಿ ಮತ್ತು ಸರಕಾರಿ ಶಾಲೆಗಳಲ್ಲಿನ 12ರಿಂದ 14 ವರ್ಷಗಳವರೆಗಿನ 300 ವಿದ್ಯಾರ್ಥಿಗಳನ್ನು ಪ್ರಯೋಗಕ್ಕೆ ಗುರಿಪಡಿಸಿದ್ದಾರೆ.
ಅತೀ ಹೆಚ್ಚು ಮೊಬೈಲ್ ಬಳಸುವ ಮಕ್ಕಳು ನಿರ್ದಿಷ್ಟ ವೇಗವನ್ನು ಕಳೆದುಕೊಳ್ಳುತ್ತಾರೆ. ಇದರಿಂದಾಗಿ ಅವರ ಜ್ಞಾಪಕ ಸಾಮರ್ಥ್ಯದಲ್ಲಿ ಹಿನ್ನಡೆ ಅನುಭವಿಸುತ್ತಾರೆ. ಯಾವುದೇ ವಿಚಾರಗಳಿಗೆ ಪ್ರತಿಕ್ರಿಯೆ ನೀಡುವಾಗ ನಿಧಾನ ಗತಿಯ ನಡೆ ಅವರದಾಗುತ್ತದೆ.
ಮೊಬೈಲ್ ಬಳಕೆಯನ್ನು ಕಡಿಮೆ ಮಾಡುವ ವಿದ್ಯಾರ್ಥಿಗಳಿಗಿಂತ ಹೆಚ್ಚು ತಪ್ಪುಗಳನ್ನು ಅತೀ ಹೆಚ್ಚು ಮೊಬೈಲ್ ಬಳಸುವವರು ಮಾಡುತ್ತಾರೆಂದು ಮೊನಾಶ್ ಯುನಿವರ್ಸಿಟಿ ತನ್ನ ವರದಿಯಲ್ಲಿ ತಿಳಿಸಿದೆ ಎಂದು 'ದಿ ಆಸ್ಟ್ರೇಲಿಯನ್' ಪತ್ರಿಕೆ ವರದಿ ಮಾಡಿದೆ.
ನಾವು ವಯಸ್ಸು, ಲಿಂಗ, ಜನಾಂಗ ಮತ್ತು ಸಾಮಾಜಿಕ-ಆರ್ಥಿಕ ಮಟ್ಟವನ್ನು ಆಧಾರವಾಗಿರಿಸಿಕೊಂಡು ಸಂಶೋಧನೆ ನಡೆಸಿದ್ದೇವೆ ಎಂದು ವರದಿ ತಯಾರಿಸಿದವರಲ್ಲೊಬ್ಬರಾದ ಡಾ. ಗೇಜಾ ಬೆಂಕೆ ತಿಳಿಸಿದ್ದಾರೆ.
ಅದೇ ಹೊತ್ತಿಗೆ ನಿರ್ದಿಷ್ಟ ಪ್ರಮಾಣಕ್ಕಿಂತ ಹೆಚ್ಚು ವೇಗವಾಗಿ ಮಕ್ಕಳು ಮುಂದುವರಿಯುವುದಕ್ಕೆ ಕೂಡ ಮೊಬೈಲ್ ಫೋನ್‌ಗಳು ಬೆಂಬಲ ನೀಡುತ್ತವೆ ಎಂದು ಅವರು ತಿಳಿಸಿದ್ದಾರೆ.