ಪಾಕಿಸ್ತಾನದಲ್ಲಿ 1 ಲೀ. ಪೆಟ್ರೋಲ್‌ಗೆ ಕೇವಲ 36 ರೂಪಾಯಿ..!
ನವದೆಹಲಿ, ಗುರುವಾರ, 6 ಆಗಸ್ಟ್ 2009( 16:16 IST )
ದಕ್ಷಿಣ ಏಷಿಯಾದಲ್ಲೇ ಗೃಹಬಳಕೆಯ ಎಲ್‌ಪಿಜಿ ಮತ್ತು ಕೆರೋಸಿನ್ ಬೆಲೆಯು ಭಾರತದಲ್ಲಿ ಅಗ್ಗ; ಆದರೆ ಪೆಟ್ರೋಲ್ ಮತ್ತು ಡೀಸೆಲ್‌ನಲ್ಲೂ ಇದನ್ನೇ ಹೇಳುವಂತಿಲ್ಲ. ಯಾಕೆಂದರೆ ಶ್ರೀಲಂಕಾ, ಪಾಕಿಸ್ತಾನ, ನೇಪಾಳ ಮತ್ತು ಬಾಂಗ್ಲಾದೇಶಗಳು ನಮಗಿಂತ ಕಡಿಮೆ ಬೆಲೆಯಲ್ಲಿ ನೀಡುತ್ತಿವೆ.
ಈ ಮಾಹಿತಿಯನ್ನು ನೀಡಿದ್ದು ಸ್ವತಃ ಸರಕಾರ. ಗುರುವಾರ ಲೋಕಸಭೆಗೆ ನೀಡಿದ ಲಿಖಿತ ಉತ್ತರದಲ್ಲಿ ಪೆಟ್ರೋಲಿಯಂ ಖಾತೆ ಸಚಿವ ಮುರಳಿ ದಿಯೋರಾ, ದಕ್ಷಿಣ ಏಷಿಯಾದಲ್ಲೇ ಅಡುಗೆ ಮಾಡಲು ಬಳಸುವ ಇಂಧನವು ದೆಹಲಿಯಲ್ಲಿ ಅತೀ ಕಡಿಮೆ ದರಕ್ಕೆ ದೊರಕುತ್ತಿದೆ ಎಂದು ಮಾಹಿತಿ ನೀಡಿದ್ದಾರೆ. ಪ್ರಸಕ್ತ ದೆಹಲಿಯಲ್ಲಿ ಸೀಮೆಎಣ್ಣೆ ದರ ಪ್ರತಿ ಲೀಟರ್‌ಗೆ 9.22 ರೂಪಾಯಿಗಳು.
ಭಾರತದ ರೂಪಾಯಿ ಲೆಕ್ಕದಲ್ಲಿ ಇದೇ ಚಿಮಣಿ ಎಣ್ಣೆಗೆ ಪಾಕಿಸ್ತಾನದಲ್ಲಿ 34.89 ರೂಪಾಯಿ, ಬಾಂಗ್ಲಾದೇಶದಲ್ಲಿ 30.53 ರೂಪಾಯಿ, ಶ್ರೀಲಂಕಾದಲ್ಲಿ 21.26 ರೂಪಾಯಿಗ ಹಾಗೂ ನೇಪಾಳದಲ್ಲಿ 34.35 ರೂಪಾಯಿ ಕೊಡಬೇಕು.
14.2 ಕಿಲೋ ಗ್ರಾಂನ ಗೃಹಬಳಕೆಯ ಎಲ್‌ಪಿಜಿ ಸಿಲಿಂಡರ್‌ಗೆ ದೆಹಲಿಯಲ್ಲಿ 281.20 ರೂಪಾಯಿ. ಇದೇ ಸಿಲಿಂಡರ್ ಪಾಕಿಸ್ತಾನದಲ್ಲಿ 483.06 ರೂಪಾಯಿಗಳ ಬೆಲೆ ಬಾಳುತ್ತದೆ. ಬಾಂಗ್ಲಾದೇಶದಲ್ಲಿ 670.12 ರೂಪಾಯಿ, ಶ್ರೀಲಂಕಾದಲ್ಲಿ 661.31 ರೂಪಾಯಿ ಹಾಗೂ ನೇಪಾಳದಲ್ಲಿ 702.72 ರೂಪಾಯಿಗಳನ್ನು ನೀಡಬೇಕಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.
ಇದ್ದುದರಲ್ಲಿ ಪೆಟ್ರೋಲ್ ಮಾತ್ರ ಪಾಕಿಸ್ತಾನಕ್ಕಿಂತ ಭಾರತದಲ್ಲಿ ದುಬಾರಿ. ದೆಹಲಿಯಲ್ಲೀಗ ಪ್ರತೀ ಲೀಟರ್ ಪೆಟ್ರೋಲ್‌ಗೆ 44.63 ರೂಪಾಯಿಗಳನ್ನು ವಿಧಿಸಲಾಗುತ್ತಿದೆ. ಇದೇ ಪೆಟ್ರೋಲ್‌ಗೆ ಪಾಕಿಸ್ತಾನದಲ್ಲಿ 36.52 ರೂಪಾಯಿಗಳು. ಆದರೆ ಬಾಂಗ್ಲಾದೇಶಕ್ಕಿಂತ (51.36 ರೂಪಾಯಿ) ನಮ್ಮ ರಾಷ್ಟ್ರದ್ದು ಅಗ್ಗ. ಶ್ರೀಲಂಕಾದಲ್ಲಿ ಒಂದು ಲೀಟರ್ ಪೆಟ್ರೋಲ್ ಬೆಲೆ ಕೇವಲ 34.35 ರೂಪಾಯಿ.
ದೆಹಲಿಯಲ್ಲಿ ಪ್ರತೀ ಲೀಟರ್ ಡೀಸೆಲ್‌ಗೆ 32.87 ರೂಪಾಯಿಯಿದ್ದರೆ, ಬಾಂಗ್ಲಾದೇಶದಲ್ಲಿ (30.53 ರೂಪಾಯಿ) ನಮ್ಮಲ್ಲಿಗಿಂತ ಎರಡು ರೂಪಾಯಿ ಕಡಿಮೆ. ಶ್ರೀಲಂಕಾದಲ್ಲೂ (30.43 ರೂಪಾಯಿ) ಹೆಚ್ಚು ಕಡಿಮೆ ಅದೇ ದರ. ಆದರೆ ಡೀಸೆಲ್ ಬೆಲೆಯು ಪಾಕಿಸ್ತಾನ (36.82) ಮತ್ತು ನೇಪಾಳಕ್ಕಿಂತ (34.35) ನಮ್ಮಲ್ಲಿ ಅಗ್ಗ ಎಂದು ಸಚಿವರು ತಿಳಿಸಿದ್ದಾರೆ.