ಅಮೆರಿಕಾದಲ್ಲಿನ ಬಳಕೆದಾರರ ವಿಶ್ವಾಸ ಕುಸಿಯಲಾರಂಭಿಸಿದ ಕಾರಣ ಏಷಿಯಾ ಮಾರುಕಟ್ಟೆಯು ವ್ಯತಿರಿಕ್ತ ಪರಿಣಾಮ ತೋರಿಸಿದ್ದು, ಕಚ್ಚಾ ತೈಲ ಬೆಲೆ ಕುಸಿತ ಕಂಡಿದೆ ಎಂದು ವಿಶ್ಲೇಷಕರು ತಿಳಿಸಿದ್ದಾರೆ.
ಸೆಪ್ಟೆಂಬರ್ ವಿತರಣೆಗಾಗಿನ ನ್ಯೂಯಾರ್ಕ್ ಪ್ರಮುಖ ಒಪ್ಪಂದ ಸಾದಾ ಕಚ್ಚಾ ತೈಲದಲ್ಲಿ 56 ಸೆಂಟ್ಸ್‌ಗಳ ಕುಸಿತ ಕಂಡಿದ್ದು, ಪ್ರತೀ ಬ್ಯಾರೆಲ್‌ಗೆ 66.95 ಅಮೆರಿಕನ್ ಡಾಲರ್‌ಗಳು ದಾಖಲಾಗಿವೆ.
ಬ್ರೆಂಟ್ ನಾರ್ತ್ ಸೀ ಕಚ್ಚಾ ತೈಲದ ಅಕ್ಟೋಬರ್ ವಿತರಣೆಯಲ್ಲಿ 44 ಸೆಂಟ್ಸ್‌ಗಳ ಕುಸಿತವಾಗಿ 71 ಡಾಲರುಗಳನ್ನು ಮುಟ್ಟಿದೆ.
ಶುಕ್ರವಾರ ಮಿಚಿಗನ್ ಯುನಿವರ್ಸಿಟಿ ಬಿಡುಗಡೆ ಮಾಡಿದ ವರದಿಯಿಂದಾಗಿ ಅಗತ್ಯ ವಸ್ತುಗಳು ಮತ್ತು ಶೇರುಮಾರುಕಟ್ಟೆಯು ಭೀತಿಗೊಳಗಾಗಿದ್ದು, ಇದೇ ಕಾರಣದಿಂದಾಗಿ ದರ ಕುಸಿತವಾಗಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಬಳಕೆದಾರರ ವಿಶ್ವಾಸ ಕುಂದಿರುವುದನ್ನು ಈ ವರದಿ ಎತ್ತಿ ತೋರಿಸಿತ್ತು. ಇದೇ ತೈಲ ಮಾರುಕಟ್ಟೆಯ ಮೇಲೂ ಪರಿಣಾಮ ಬೀರಿದೆ. ಶೇರುಮಾರುಕಟ್ಟೆಯ ಕುಸಿತದಿಂದಾಗಿ ತೈಲ ಮಾರುಕಟ್ಟೆಯೂ ಒತ್ತಡವನ್ನು ಎದುರಿಸಬೇಕಾಯಿತು ಎಂದು ಸಿಂಗಾಪುರದ ವಿಕ್ಟರ್ ಶಮ್ ಎಂಬ ಮಾರುಕಟ್ಟೆ ವಿಶ್ಲೇಷಕರ ವಿವರಿಸಿದ್ದಾರೆ.