ವೈಮಾನಿಕ ಇಂಧನ ದರ (ಎಟಿಎಫ್) ಮೇಲಿನ ತೆರಿಗೆಗಳನ್ನು ಕಡಿತಗೊಳಿಸಬೇಕು ಎಂದು ವಿಮಾನಯಾನ ಕ್ಷೇತ್ರವು ಒತ್ತಡ ತಂದಿರುವ ಹೊರತಾಗಿಯೂ ಬಹುತೇಕ ರಾಜ್ಯಗಳು ತಮ್ಮ ತೆರಿಗೆ ನೀತಿಯನ್ನು ಬದಲಾಯಿಸುವ ಒಲವು ತೋರಿಸಿಲ್ಲ. ವೈಮಾನಿಕ ಇಂಧನದ ಮೇಲಿನ ತೆರಿಗೆಯಲ್ಲಿ ಕಡಿತವಾಗುವ ಸಾಧ್ಯತೆಗಳು ತೀರಾ ಕಡಿಮೆ ಎಂದು ಮೂಲಗಳು ತಿಳಿಸಿವೆ.
ರಾಜ್ಯಗಳು ವೈಮಾನಿಕ ಸಚಿವಾಲಯದ ಬೆಂಬಲಕ್ಕೆ ನಿಲ್ಲುವ ಸಾಧ್ಯತೆಗಳಿಲ್ಲ. ಹಾಗೆ ಮಾಡಿದಲ್ಲಿ ನಮಗೆ ಯಾವುದೇ ಹೆಚ್ಚುವರಿ ಅನುಕೂಲತೆಗಳು ಸಿಗದು ಎಂದು ಈ ಬೆಳವಣಿಗೆಗಳ ನಿಕಟ ಮೂಲವೊಂದು ಪ್ರತಿಕ್ರಿಯಿಸಿದೆ.
ವ್ಯಾಟ್ ಬಗ್ಗೆ ರಾಜ್ಯಗಳ ಹಣಕಾಸು ಸಚಿವರ ಅಧಿಕಾರಯುತ ಸಮಿತಿಯ ಸಭೆಯು ಈ ವಾರದಲ್ಲಿ ರಾಷ್ಟ್ರ ರಾಜಧಾನಿಯಲ್ಲಿ ನಡೆಯುವ ಸಾಧ್ಯತೆಗಳಿವೆ.
ಅದೇ ಹೊತ್ತಿಗೆ ವಿಮಾನಯಾನ ಕ್ಷೇತ್ರಕ್ಕೆ ನಿಟ್ಟುಸಿರು ತರಿಸಬಹುದಾದ ವೈಮಾನಿಕ ಇಂಧನ ದರದ ಮೇಲಿನ ಮಾರಾಟ ತೆರಿಗೆ ಕುರಿತ ಚರ್ಚೆಗಳು ಈ ಸಭೆಯಲ್ಲಿ ನಡೆಯುವುದಿಲ್ಲ. ಇತ್ತೀಚೆಗಷ್ಟೇ ಜಾರಿಗೆ ಬಂದ ನೂತನ ನೇರ ತೆರಿಗೆ ಪದ್ಧತಿ, ಸರಕು ಮತ್ತು ಸೇವಾ ತೆರಿಗೆ ಕುರಿತು ಸಮಾಲೋಚನೆಗಳು ನಡೆಯಲಿವೆ.
ಈ ವಿಚಾರದ ಬಗ್ಗೆ ಚರ್ಚಿಸಲು ಏನಿದೆ? ಎಟಿಎಫ್ ತೆರಿಗೆ ಮೇಲಿನ ವಿಚಾರದಲ್ಲಿ ನಮ್ಮ ನಿಲುವು ಸ್ಪಷ್ಟವಾಗಿದೆ ಎಂದು ಮೂಲವೊಂದು ತಿಳಿಸಿದೆ.
ವೈಮಾನಿಕ ಇಂಧನ ದರ ಗರಿಷ್ಠ ಮಟ್ಟಕ್ಕೇರಲು ಪ್ರಮುಖ ಕಾರಣ ರಾಜ್ಯಗಳು ಅದರ ಮೇಲೆ ವಿಧಿಸುತ್ತಿರುವ ಗರಿಷ್ಠ ಪ್ರಮಾಣದ ಮಾರಾಟ ತೆರಿಗೆ. ಇತ್ತೀಚೆಗಷ್ಟೇ ರಾಜ್ಯಗಳು ವಿಧಿಸುವ ತೆರಿಗೆ ಬಗ್ಗೆ ಪರಿಶೀಲನೆ ನಡೆಸಲು ಕೇಂದ್ರ ನಾಗರಿಕ ವಿಮಾನಯಾನ ಸಚಿವಾಲಯವು ಸಚಿವರ ಸಮೂಹವೊಂದನ್ನು ರಚಿಸಿತ್ತು. ಅಲ್ಲದೆ ರಾಜ್ಯಗಳು ತೆರಿಗೆ ಕಡಿತ ಮಾಡಬೇಕು ಎಂದೂ ಸಚಿವಾಲಯ ಒತ್ತಾಯಿಸಿತ್ತು.
ರಾಜಸ್ತಾನವು ಕಳೆದ ತಿಂಗಳು ಮಂಡಿಸಿದ ಬಜೆಟ್‌ನಲ್ಲಿ ವೈಮಾನಿಕ ಇಂಧನದ ಮೇಲಿನ ತೆರಿಗೆಯನ್ನು ಶೇ.28ರಿಂದ ಶೇ.4ಕ್ಕೆ ಇಳಿಕೆ ಮಾಡಿದೆ. ಕೆಲವು ರಾಜ್ಯಗಳು ಶೇ.30ರಷ್ಟು ತೆರಿಗೆ ವಿಧಿಸುತ್ತಿವೆ. ಆಂಧ್ರಪ್ರದೇಶವು ಕಳೆದ ವರ್ಷ ಜೆಟ್ ಇಂಧನ ತೆರಿಗೆಯನ್ನು ಶೇ.4ಕ್ಕೆ ಇಳಿಸಿತ್ತು.