ಉಳಿತಾಯ ಖಾತೆ ಮೇಲಿನ ಬಡ್ಡಿ ನೀತಿಗಳು ಬದಲಾಗಲಿದ್ದು, 2010ರ ಏಪ್ರಿಲ್ ನಂತರ ಉಳಿತಾಯ ಖಾತೆಯಲ್ಲಿದ್ದ ಹಣಕ್ಕೆ ದಿನವಹೀ ಬಡ್ಡಿ ಲಭಿಸಲಿದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್ ತಿಳಿಸಿದೆ. ಪ್ರಸಕ್ತ ತಿಂಗಳ ಅವಧಿಯಲ್ಲಿ ಖಾತೆಯಲ್ಲಿರುವ ಕನಿಷ್ಠ ಮೊತ್ತವನ್ನು ಮಾತ್ರ ಬಡ್ಡಿಗೆ ಪರಿಗಣಿಸಲಾಗುತ್ತಿದೆ.
ಇದನ್ನು ದೇಶದಾದ್ಯಂತದ ವಾಣಿಜ್ಯ ಬ್ಯಾಂಕುಗಳು ಅನುಸರಿಸಬೇಕು. ವಾಣಿಜ್ಯ ಬ್ಯಾಂಕುಗಳು ಎಂದರೆ ಸಹಕಾರಿ ಬ್ಯಾಂಕುಗಳನ್ನು ಹೊರತುಪಡಿಸಿ ಬಹುತೇಕ ಎಲ್ಲಾ ಬ್ಯಾಂಕುಗಳೂ ಇದರಡಿಯಲ್ಲೇ ಬರುತ್ತವೆ.
ಬ್ಯಾಂಕ್ ನಿರ್ದೇಶನಾಲಯದ ಪ್ರಕಾರ ಮುಂದಿನ ಏಪ್ರಿಲ್ ನಂತರ ಉಳಿತಾಯ ಖಾತೆಯ ಮೇಲಿನ ಬಡ್ಡಿಯನ್ನು ದಿನವಹೀ ಲೆಕ್ಕ ಹಾಕಲಾಗುತ್ತದೆ. ಆ ಮೂಲಕ ಕಳೆದ 69 ವರ್ಷಗಳಿಂದ ಅನುಸರಿಸುತ್ತಿದ್ದ ನೀತಿಯಲ್ಲಿ ಬದಲಾವಣೆಯಾಗಲಿದೆ.
ಪ್ರಸಕ್ತ ಇರುವ ನಿಯಮಗಳ ಪ್ರಕಾರ ಪ್ರತೀ ತಿಂಗಳ 10ನೇ ತಾರೀಕಿನಿಂದ ತಿಂಗಳ ಅಂತ್ಯದವರೆಗೆ ಉಳಿತಾಯ ಖಾತೆಯಲ್ಲಿರುವ ಕನಿಷ್ಠ ಮೊತ್ತವನ್ನು ಮಾತ್ರ ಪರಿಗಣಿಸಿ ಬಡ್ಡಿ ನೀಡಲಾಗುತ್ತಿತ್ತು.
ಅಂದರೆ ಬ್ಯಾಂಕ್ ಗ್ರಾಹಕನು 10ನೇ ತಾರೀಕಿನ ನಂತರ ಒಂದು ದಿನ ಖಾತೆಯಲ್ಲಿ ಒಂದು ಲಕ್ಷ ರೂಪಾಯಿಯನ್ನು ಉಳಿಸಿರುತ್ತಾನೆ. ಮತ್ತೊಂದು ದಿನ ಕೇವಲ 100 ರೂಪಾಯಿಯನ್ನಷ್ಟೇ ಉಳಿಸಿರುತ್ತಾನೆ. ಆಗ ಬಡ್ಡಿ ಲೆಕ್ಕಾಚಾರಕ್ಕೆ 100 ರೂಪಾಯಿನ್ನು ಮಾತ್ರ ಪರಿಗಣಿಸಲಾಗುತ್ತಿತ್ತು.
ಹೊಸ ನಿಯಮಗಳ ಪ್ರಕಾರ ಕನಿಷ್ಠ ಮೊತ್ತದ ಮೇಲಿನ ಬಡ್ಡಿಯೆಂದು ಪರಿಗಣಿಸಲಾಗುವುದಿಲ್ಲ. ಬದಲಿಗೆ ಖಾತೆಯಲ್ಲಿ ಯಾವ ದಿನ ಎಷ್ಟು ಹಣವಿತ್ತೋ ಅಷ್ಟು ಹಣಕ್ಕೆ ಬ್ಯಾಂಕು ಬಡ್ಡಿ ನೀಡುತ್ತದೆ. ಅಂದರೆ ನೀವು ಒಂದು ಲಕ್ಷ ರೂಪಾಯಿಯನ್ನು ಒಂದು ದಿನ ಖಾತೆಯಲ್ಲಿ ಉಳಿಸಿದರೂ, ನಂತರ ನಿಮ್ಮ ಖಾತೆಯಲ್ಲಿ 100 ರೂಪಾಯಿ ಮಾತ್ರ ಉಳಿದುಕೊಂಡಿದ್ದರೂ, ಒಂದು ಲಕ್ಷ ರೂಪಾಯಿಗೆ ಒಂದು ದಿನದ ಬಡ್ಡಿ ನಿಮಗೆ ಸಿಗಲಿದೆ.
ಪ್ರಸಕ್ತ ಬ್ಯಾಂಕುಗಳು ಹೊಂದಿರುವ ಬಡ್ಡಿ ನಿಯಮದ ವಿರುದ್ಧ ಮಧ್ಯಪ್ರದೇಶದ ಮಹೇಶ್ ನತಾನಿ ಮತ್ತು ಅಜಿತ್ ಜೈನ್ ಎಂಬ ಉದ್ಯಮಿಗಳು ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯ ದಾವೆ ಹೂಡಿದ್ದರು.
ಬ್ಯಾಂಕುಗಳು ಗ್ರಾಹಕರಿಗೆ ಸಾಲ ನೀಡುವಾಗ ದಿನವಹೀ ಬಡ್ಡಿಯನ್ನು ವಸೂಲಿ ಮಾಡುತ್ತವೆ. ಆದರೆ ನಾವು ಬ್ಯಾಂಕಿನಲ್ಲಿ ಹಣ ಇಟ್ಟಾಗ ಅದಕ್ಕೆ ದಿನವಹೀ ಬಡ್ಡಿಯನ್ನು ನೀಡುವುದಿಲ್ಲ ಎಂಬುದು ಅವರ ವಾದವಾಗಿತ್ತು. ಇದಕ್ಕೆ ಉತ್ತರಿಸಿದ್ದ ಭಾರತೀಯ ರಿಸರ್ವ್ ಬ್ಯಾಂಕ್, ಬಡ್ಡಿದರ ಲೆಕ್ಕಾಚಾರದ ತನ್ನ ಹಳೆ ನಿಯಮವನ್ನು ಬದಲಾಯಿಸಿ, 2010ರ ಏಪ್ರಿಲ್‌ನಿಂದ ನೂತನ ನಿಯಮ ಜಾರಿಗೊಳಿಸುವುದಾಗಿ ತಿಳಿಸಿತ್ತು.