ರಾಜ್ಯ ರಾಜಧಾನಿಯಲ್ಲಿ ಜನವರಿಯಲ್ಲಿ ನಡೆಯಲಿರುವ ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನಲೆಯಲ್ಲಿ ಬಂಡವಾಳದಾರರನ್ನು ಸೆಳೆಯುವ ಸಲುವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮುಂದಿನ ತಿಂಗಳು ಚೀನಾ ಮತ್ತು ಜಪಾನ್ ಪ್ರವಾಸ ಮಾಡಲಿದ್ದಾರೆ.
ಜಾಗತಿಕ ಹೂಡಿಕೆದಾರರ ಸಮಾವೇಶದ ಪೂರ್ವತಯಾರಿಯ ಅಂಗವಾಗಿ ಈ ಎರಡು ದೇಶಗಳಲ್ಲಿ ನಡೆಯಲಿರುವ ರೋಡ್ ಶೋಗಳಲ್ಲಿ ಯಡಿಯೂರಪ್ಪ ಪಾಲ್ಗೊಳ್ಳಲಿದ್ದಾರೆ.
ಇದೇ ರೀತಿಯ ರೋಡ್ ಶೋಗಳನ್ನು ಯುಎಇ ಮತ್ತು ಅಮೆರಿಕಾಗಳಲ್ಲಿ ಸೆಪ್ಟೆಂಬರ್-ಅಕ್ಟೋಬರ್ ತಿಂಗಳುಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ ಎಂದು ರಾಜ್ಯ ಅನಿವಾಸಿ ಭಾರತೀಯ ಸಮಿತಿಯ ಮುಖ್ಯಸ್ಥ ಗಣೇಶ್ ಕಾರ್ಣಿಕ್ ತಿಳಿಸಿದ್ದಾರೆ.
ದೇಶದಲ್ಲಿಯೂ ಈ ರೋಡ್ ಶೋಗಳು ನಡೆಯಲಿವೆ. ಕೊಲ್ಕತ್ತಾ, ದೆಹಲಿ, ಮುಂಬೈ, ಹೈದರಾಬಾದ್ ಮತ್ತು ಚೆನ್ನೈಗಳಲ್ಲಿ ಆಗಸ್ಟ್ ಕೊನೆಯ ವಾರದಲ್ಲಿ ಈ ರ‌್ಯಾಲಿಗಳು ನಡೆಯಲಿವೆ ಎಂದು ಕಾರ್ಣಿಕ್ ವಿವರಿಸಿದರು.
ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನಲೆಯಲ್ಲಿ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಮತ್ತು ಇನ್ಫೋಸಿಸ್ ಟೆಕ್ನಾಲಜೀಸ್ ಲಿಮಿಟೆಡ್ ಸೇರಿದಂತೆ ಕೈಗಾರಿಕ ಸಂಘಗಳು ಮತ್ತು ಪ್ರತಿನಿಧಿಗಳ ಜತೆ ಸರಕಾರ ಮಾತುಕತೆ ನಡೆಸಿದೆ.
ಈ ಸಂದರ್ಭದಲ್ಲಿ ಜರ್ಮನಿ ಮತ್ತು ಯೂರೋಪ್‌ನ ಇತರ ರಾಷ್ಟ್ರಗಳಲ್ಲೂ ರೋಡ್ ಶೋಗಳನ್ನು ನಡೆಸುವ ಬಗ್ಗೆ ಚರ್ಚೆ ನಡೆಸಲಾಗಿದೆ. ಜಾಗತಿಕ ಆರ್ಥಿಕ ಹಿನ್ನಡೆಯಿಂದ ನಿಧಾನವಾಗಿ ಚೇತರಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ ಸಮ್ಮೇಳನ ಆಯೋಜಿಸುವುದು ಅತ್ಯುತ್ತಮ ಬೆಳವಣಿಗೆ ಎಂದು ಸಭೆಯಲ್ಲಿ ಭಾಗವಹಿಸಿದ ಹಲವು ಕೈಗಾರಿಕೋದ್ಯಮಿಗಳು ಅಭಿಪ್ರಾಯಪಟ್ಟಿದ್ದಾರೆ.
ಈ ಸಂದರ್ಭದಲ್ಲಿ ಸಮಾವೇಶಕ್ಕೆ ಪೂರಕವಾಗಿ ಹಲವು ಸಮಿತಿಗಳನ್ನು ಕೂಡ ರಚಿಸಲಾಗಿದೆ. ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಸಾರಿಗೆ ಸಚಿವ ಆರ್. ಅಶೋಕ್, ಪ್ರಚಾರ ಸಮಿತಿ ಅಧ್ಯಕ್ಷರಾಗಿ ಮಾಹಿತಿ ಮತ್ತು ತಂತ್ರಜ್ಞಾನ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಮಂತ್ರಿ ಮುರುಗೇಶ್ ನಿರಾಣಿಯವರನ್ನು ನೇಮಕಗೊಳಿಸಲಾಗಿದೆ ಎಂದು ಕಾರ್ಣಿಕ್ ತಿಳಿಸಿದ್ದಾರೆ.