ಸಂಕಷ್ಟಕ್ಕೆ ಸಿಲುಕಿದ್ದ ಭಾರತದ ರಫ್ತು ಉದ್ಯಮವು ಪ್ರಸಕ್ತ ಚೇತರಿಕೆಯ ಹಾದಿಯಲ್ಲಿದ್ದು, ವರ್ಷಾಂತ್ಯದೊಳಗೆ ಸಂಪೂರ್ಣ ಸುಧಾರಣೆ ಕಾಣಲಿದೆ ಎಂದು ಕೈಗಾರಿಕಾ ಸಮೀಕ್ಷೆಯೊಂದು ತಿಳಿಸಿದೆ.
ವರ್ಷದ ಮೇಲಿನ ವರ್ಷದ ಆಧಾರಿತ ಪ್ರಮಾಣದ ಹಿನ್ನಡೆಯು ಮುಂದಿನ ಕೆಲವು ತಿಂಗಳುಗಳಲ್ಲಿ ಕಡಿಮೆಯಾಗಲಿದೆ. ಆದರೆ ರಫ್ತು ಉದ್ಯಮವು ಧನಾತ್ಮಕ ಪ್ರಗತಿಯನ್ನು ಕಾಣಲಿದ್ದು, ನಾವು ವರ್ಷಾಂತ್ಯದವರೆಗೆ ಕಾಯಬೇಕಾಗುತ್ತದೆ ಎಂದು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟ (ಎಫ್‌ಐಸಿಸಿಐ) ನಡೆಸಿದ ಸಮೀಕ್ಷೆಯಲ್ಲಿ ವಿವರಿಸಿದೆ.
ವಿನಿಯಮ ದರದಲ್ಲಿನ ಸ್ಥಿರತೆಯ ಕೊರತೆಯಿಂದುಂಟಾಗುವ ನಷ್ಟ ಮತ್ತು ಕಚ್ಚಾ ವಸ್ತುಗಳ ಬೆಲೆಯೇರಿಕೆಯಿಂದ ರಫ್ತುದಾರರಿಗೆ ಉಂಟಾಗಿರುವ ಒತ್ತಡದ ಹೊರತಾಗಿಯೂ ಒಟ್ಟಾರೆ ಪರಿಸ್ಥಿತಿ ಸುಧಾರಣೆಯಲ್ಲಿದೆ ಎಂದು ಸಮೀಕ್ಷೆ ತಿಳಿಸಿದೆ.
ಜೂನ್-ಜುಲೈ ಅವಧಿಯಲ್ಲಿ ಸುಮಾರು 316 ಕಂಪನಿಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ 50 ಲಕ್ಷದಿಂದ 7,000 ಕೋಟಿಗಳವರೆಗೆ ಚೇತರಿಕೆ ಕಂಡಿರುವ ಅಂಶಗಳನ್ನು ವಿವರಿಸಲಾಗಿದೆ.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ದುರ್ಬಲಗೊಂಡ ಬೇಡಿಕೆ, ಸ್ಪರ್ಧಾತ್ಮಕ ವಾತಾವರಣದಲ್ಲಿ ತೀವ್ರ ಹೆಚ್ಚಳ ಮತ್ತು ಸಾಲ ದುಬಾರಿ ಸೇರಿದಂತೆ ಹಲವು ರೀತಿಯ ಸವಾಲುಗಳನ್ನು ರಫ್ತುದಾರರು ಎದುರಿಸಿದ್ದಾರೆ. ಇದು ಪುನರಾವರ್ತನೆಯಾಗುತ್ತಿದ್ದ ಕಾರಣದಿಂದಾಗಿ ರಫ್ತು ವ್ಯವಹಾರದ ಮೇಲೆ ಹೊಡೆತ ಬಿದ್ದಿತ್ತು.
ಭಾರತದ ರಫ್ತು ವ್ಯವಹಾರವು 2008ರ ಅಕ್ಟೋಬರ್ ತಿಂಗಳ ನಂತರ ಸತತ ಒಂಬತ್ತು ತಿಂಗಳುಗಳ ಅವಧಿಯಲ್ಲೂ ಕುಸಿತದ ಹಾದಿಯಲ್ಲಿದೆ.