ವಿಶ್ವದಲ್ಲಿಯೇ ಕ್ಷಿಪ್ರ ಪ್ರಗತಿ ಕಾಣುತ್ತಿರುವ ಅಗ್ರ 100 ಕಂಪನಿಗಳಲ್ಲಿ ಐಟಿ ದಿಗ್ಗಜ ಇನ್ಫೋಸಿಸ್ ಟೆಕ್ನಾಲಜೀಸ್ ಒಂದು ಎಂದು ಅಮೆರಿಕನ್ ನಿಯತಕಾಲಿಕ 'ಫಾರ್ಚೂನ್' ಪಟ್ಟಿ ಮಾಡಿದೆ. ಇದರಲ್ಲಿ ಅಂತರ್ಜಾಲ ದೈತ್ಯ ಗೂಗಲ್ ಹಾಗೂ ಸಾಫ್ಟ್‌ವೇರ್ ವಲಯದ ಮೇರು ಸಂಸ್ಥೆ ಆಪಲ್ ಕೂಡ ಸ್ಥಾನ ಪಡೆದಿವೆ.
ಅಗ್ರ 100ರ ಪಟ್ಟಿಯಲ್ಲಿ ಮೊದಲ ಸ್ಥಾನ ಕೆನಡಾ ಮೂಲದ 'ರೀಸರ್ಚ್ ಇನ್ ಮೋಷನ್' ಕಂಪನಿಯ ಪಾಲಾಗಿದೆ. ಇದು ಬ್ಲಾಕ್‌ಬೆರ್ರಿ ಫೋನ್ ತಯಾರಿಕಾ ಕಂಪನಿ.
ಭಾರತೀಯ ಮೂಲ ಫ್ರಾನ್ಸಿಸ್ಕೋ ಡಿಸೋಜ ಮುಖ್ಯ ಕಾರ್ಯನಿರ್ವಾಹಕರಾಗಿರುವ 'ಕೋಜ್ನಿಜೆಂಟ್ ಟೆಕ್ನಾಲಜಿ ಸೊಲ್ಯೂಷನ್ಸ್' ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದಿದೆ.
ಬೆಂಗಳೂರು ಮೂಲದ ಇನ್ಫೋಸಿಸ್ 100ನೇ ಸ್ಥಾನದಲ್ಲಿದ್ದರೆ, ಕೋಜ್ನಿಜೆಂಟ್ 90ರಲ್ಲಿದೆ. ಆಪಲ್ ಮತ್ತು ಗೂಗಲ್ ಕ್ರಮವಾಗಿ 39 ಮತ್ತು 68ನೇ ಸ್ಥಾನಗಳಲ್ಲಿವೆ.
'ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಭಾರತದ ನಂ.2 ಸಂಸ್ಥೆ ಇನ್ಫೋಸಿಸ್ ಗೋಲ್ಡ್‌ಮ್ಯಾನ್ ಸ್ಯಾಚ್ಸ್ ಮತ್ತು ಯುಬಿಎಸ್ ಸೇರಿದಂತೆ 570 ಪ್ರಮುಖ ಗ್ರಾಹಕರನ್ನು ಹೊಂದಿದೆ' ಎಂದು ಇನ್ಫೋಸಿಸ್ ಬಗ್ಗೆ ಮ್ಯಾಗಜಿನ್ ಟಿಪ್ಪಣಿ ಮಾಡಿದೆ.
ಕೋಜ್ನಿಜೆಂಟ್ ಚೀನಾ ಮತ್ತು ಭಾರತದಲ್ಲಿ ಅತೀ ಹೆಚ್ಚು ಪ್ರಗತಿ ಸಾಧಿಸಿರುವುದನ್ನೂ ಫಾರ್ಚೂನ್ ಗುರುತಿಸಿದೆ. ಅಗ್ರ 100ರ ಪಟ್ಟಿಯಲ್ಲಿ ನಾಸ್ದಾಕ್ ಓಎಂಎಕ್ಸ್ ಗ್ರೂಪ್ 42, ಅಮೆಜಾನ್.ಕಾಮ್ 52 ಹಾಗೂ ಡ್ರೀಮ್‌ವರ್ಕ್ಸ್ ಅನಿಮೇಷನ್ ಎಸ್‌ಕೆಜಿ 63ನೇ ಸ್ಥಾನಗಳಲ್ಲಿ ಗುರುತಿಸಿಕೊಂಡಿವೆ.