ನೀವು ಮಾತನಾಡಿದ್ದಕ್ಕೆ ಸೆಕುಂಡುಗಳ ಲೆಕ್ಕದಲ್ಲಿ ಹಣ ಪಾವತಿಸಿ ಎಂಬ ಘೋಷ ವಾಕ್ಯದೊಂದಿಗೆ ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು, ಒರಿಸ್ಸಾ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಛತ್ತೀಸ್‌ಗಢಗಳಲ್ಲಿ ಜಿಎಸ್‌ಎಂ ಸೇವೆ ಆರಂಭಿಸಿದ 'ಟಾಟಾ ಡೊಕೊಮೊ' ಭಾರೀ ಯಶಸ್ಸು ಕಾಣುತ್ತಿದೆಯಂತೆ.
ಈಗಾಗಲೇ ಇತರ ಸೇವಾದಾರರ ಸಹಸ್ರಾರು ಗ್ರಾಹಕರನ್ನು ಸೆಳೆದುಕೊಂಡಿರುವ ಟಾಟಾ ಹೆಮ್ಮೆಯಿಂದ ಬೀಗುತ್ತಿದೆ. ಎರಡನೇ ಹಂತದ ನಗರಗಳಲ್ಲಂತೂ ಭರ್ಜರಿ ಪ್ರತಿಕ್ರಿಯೆ ದೊರಕಿದೆ ಎನ್ನುತ್ತಿದೆ ಕಂಪನಿ.
ಮೊಬೈಲ್ ಮಿತವಾಗಿ ಬಳಸುವ ಅಧ್ಯಾಪಕರೊಬ್ಬರ ಪ್ರಕಾರ ಅವರಿಗೆ ಭಾರೀ ಲಾಭವಾಗಿದೆಯಂತೆ. ಇತ್ತೀಚೆಗಷ್ಟೇ ಅವರು ಟಾಟಾ ಡೊಕೊಮೊ ಸಿಮ್ ಪಡೆದುಕೊಂಡಿದ್ದರು. ಅವರು ಹೆಚ್ಚಾಗಿ ಒಂದು ನಿಮಿಷಗಳಿಗೂ ಕಡಿಮೆ ಅವಧಿಯಲ್ಲಿ ತನ್ನ ಕರೆಯನ್ನು ಮುಗಿಸುತ್ತಾರೆ.
ಈ ಹಿಂದೆ ಇತರ ಸೇವಾದಾರರ ನೆಟ್‌ವರ್ಕ್‌ನಲ್ಲಾದರೆ ಪೂರ್ತಿ ಒಂದು ನಿಮಿಷದ ಹಣ ಕಡಿತವಾಗುತ್ತಿತ್ತು. ಆದರೆ ಈಗ ಹಾಗಲ್ಲ. ನನ್ನ ಮಾತುಗಳು ಕೇವಲ 20 ಸೆಕುಂಡುಗಳಲ್ಲಿ ಮುಗಿದು ಹೋಗುತ್ತದೆ. ಟಾಟಾ ಡೊಕೊಮೊದಲ್ಲಿ 20 ಪೈಸೆ ಮಾತ್ರ ಕಡಿತವಾಗುತ್ತಿದೆ. ಹಾಗಾಗಿ ನನಗೀಗ ಒಂದು ಕರೆಯಲ್ಲಿ ಕನಿಷ್ಠ 40 ಪೈಸೆ ಉಳಿತಾಯವಾಗುತ್ತಿದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಇದರ ಲೈಫ್‌ಟೈಮ್ ಸಿಮ್ ಕಾರ್ಡ್ ಬೆಲೆಯೂ ತೀರಾ ಕಡಿಮೆ. 99 ರೂಪಾಯಿಯಲ್ಲಿ ಸಿಮ್ ಖರೀದಿಸಿದರೆ 43 ರೂಪಾಯಿಯ ಟಾಕ್ ಟೈಮ್ ಕೂಡ ಸಿಗುತ್ತದೆ. ಅಂದರೆ ಅದರಲ್ಲೇ 2580 ಸೆಕುಂಡುಗಳ ಕಾಲ ಮಾತನಾಡಬಹುದು.
ಆರ್ಥಿಕ ಹಿಂಜರಿತ, ಬೆಲೆಯೇರಿಕೆಯಿಂದ ಜನಸಾಮಾನ್ಯರೂ ಜರ್ಜರಿತವಾಗಿರುವ ಸಂದರ್ಭದಲ್ಲಿ ಟಾಟಾ ಡೊಕೊಮೊ ಸೇವೆ ಅಮೂಲ್ಯವೆನಿಸಿದೆ. ಅದರಲ್ಲೂ ಗ್ರಾಮೀಣ ಪ್ರದೇಶದ ಬಳಕೆದಾರರಿಗೆ ಇದು ಹೆಚ್ಚು ಉಪಯೋಗಕಾರಿ ಎಂದು ಗ್ರಾಹಕರೊಬ್ಬರು ಅಭಿಪ್ರಾಯಪಟ್ಟಿದ್ದಾರೆ.