ದರಯೇರಿಕೆಯನ್ನು ಕಡಿವಾಣ ಹಾಕುವ ನಿಟ್ಟಿನಲ್ಲಿ ಗೋಧಿ ಮತ್ತು ಅಕ್ಕಿಯನ್ನು ರಾಷ್ಟ್ರದಾದ್ಯಂತ ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಕೇಂದ್ರ ಸರಕಾರ ನಿರ್ಧರಿಸಿದೆ.
ಸರಕಾರವು 30 ಲಕ್ಷ ಟನ್ ಗೋಧಿ ಮತ್ತು 25 ಲಕ್ಷ ಟನ್ ಅಕ್ಕಿಯನ್ನು ಮಾರುಕಟ್ಟೆಗೆ ಬಿಡುಗಡೆ ಮಾಡುವ ಸಾಧ್ಯತೆಗಳಿವೆ.
ದೇಶದಲ್ಲಿನ ಹಲವು ಭಾಗಗಳು ಬರಪೀಡಿತವಾಗಿರುವ ಹಿನ್ನಲೆಯಲ್ಲಿ ವಿತ್ತ ಸಚಿವ ಪ್ರಣಬ್ ಮುಖರ್ಜಿ ಮುಂದಾಳುತ್ವದ ಸಶಕ್ತ ಸಚಿವರ ಸಮೂಹ (ಇಜಿಓಎಂ) ಈ ನಿರ್ಧಾರಕ್ಕೆ ಬಂದಿದೆ.
ದೇಶದ ಕೃಷಿ ಪ್ರಧಾನವಾಗಿರುವ ಬಹುತೇಕ ಭಾಗಗಳಲ್ಲಿ ಮಳೆ ಕಡಿಮೆಯಾಗಿರುವ ಕಾರಣ ಆಹಾರೋತ್ಪನ್ನಗಳ ಬೆಲೆ ಮಾರುಕಟ್ಟೆಗಳಲ್ಲಿ ಗಗನಕ್ಕೇರಿದೆ. ಇದೀಗ ಸರಕಾರವು ಗೋಧಿ, ಶಾರ್ಬತಿ ಗೋಧಿಯನ್ನು ಪ್ರತೀ ಕಿಲೋವೊಂದಕ್ಕೆ 20 ರೂಪಾಯಿಗಳಂತೆ ಮಾರಾಟ ಮಾಡಲಿದೆ. ಸೆಹೋರಿ ಗೋಧಿಯ ಬೆಲೆ 27 ರೂಪಾಯಿಗಳು.
ಬಾಸ್ಮತಿ ಅಕ್ಕಿಯ ಬೆಲೆ ಪ್ರತೀ ಕಿಲೋವೊಂದಕ್ಕೆ 60 ರೂಪಾಯಿಗಳಿಂದ 120 ರೂಪಾಯಿಗಳು. ಗುಣಮಟ್ಟವನ್ನು ಆಧರಿಸಿ ಇದರ ಬೆಲೆ ನಿಗದಿಪಡಿಸಲಾಗುತ್ತದೆ. ಕೋಲಮ್ ಮತ್ತು ಲಾಂಜಿ ಅಕ್ಕಿಯನ್ನು 32 ರೂಪಾಯಿಗಳಂತೆ ಮಾರಾಟ ಮಾಡಲಾಗುತ್ತದೆ ಎಂದು ಮೂಲಗಳು ತಿಳಿಸಿವೆ.