ಟೆಲಿಕಾಂ ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಟೆಕ್ ಮಹೀಂದ್ರಾ ನಂ.1
ನವದೆಹಲಿ, ಮಂಗಳವಾರ, 18 ಆಗಸ್ಟ್ 2009( 15:05 IST )
ದೇಶದ ಐದನೇ ಅತಿ ದೊಡ್ಡ ಸಾಫ್ಟ್‌ವೇರ್ ರಫ್ತುದಾರ ಟೆಕ್ ಮಹೀಂದ್ರಾ, ಭಾರತದ ಅಗ್ರ ಟೆಲಿಕಾಂ ಸಾಫ್ಟ್‌ವೇರ್ ಸೇವಾ ಪೂರೈಕೆದಾರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 'ವಾಯ್ಸ್ & ಡಾಟಾ' ಎಂಬ ಉದ್ಯಮ ವಲಯದ ನಿಯತಕಾಲಿಕ ಈ ಸಮೀಕ್ಷೆ ನಡೆಸಿದೆ.
'ವಾಯ್ಸ್ & ಡಾಟಾ'ದ 14ನೇ ವಾರ್ಷಿಕ ಸಮೀಕ್ಷೆಯಲ್ಲಿ ತಾನು ದೇಶದ ಅಗ್ರ ಟೆಲಿಕಾಂ ಸಾಫ್ಟ್‌ವೇರ್ ಪೂರೈಕೆದಾರ ಎಂದು ಹೆಸರಿಸಲಾಗಿದೆಯೆಂದು ಟೆಕ್ ಮಹೀಂದ್ರಾ ಹೇಳಿಕೊಂಡಿದೆ.
PR
2008-09ರ ಸಾಲಿನಲ್ಲಿ ಭಾರತೀಯ ಮಾಹಿತಿ ತಂತ್ರಜ್ಞಾನ ಕ್ಷೇತ್ರವು 25,152 ಕೋಟಿಯ ವ್ಯವಹಾರ ನಡೆಸಿದ್ದು, ಇದರಲ್ಲಿ ಟೆಕ್ ಮಹೀಂದ್ರಾ ಶೇಕಡಾ 17.7ರ ಮಾರುಕಟ್ಟೆ ಪಾಲನ್ನು ಪಡೆದುಕೊಂಡಿದೆ.
ಇಲ್ಲಿ ಎರಡನೇ ಸ್ಥಾನ ಶೇ.16.8ರ ಪಾಲು ಹೊಂದಿರುವ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ನದ್ದು. ವಿಪ್ರೋ ಶೇ.16.4, ಇನ್ಫೋಸಿಸ್ ಶೇ.15.6, ಸಸ್ಕೇನ್ ಶೇ.2.9 ಹಾಗೂ ಸ್ಯೂಬೆಕ್ಸ್ ಶೇ.2.4ರ ಪಾಲು ಹೊಂದಿವೆ. ಇತರರು ಶೇ.28.2ರ ಮಾರುಕಟ್ಟೆ ಪಾಲನ್ನು ಹೊಂದಿದ್ದಾರೆಂದು ಸಮೀಕ್ಷೆ ತಿಳಿಸಿದೆ.
ಪ್ರಗತಿಯ ವಿಚಾರಕ್ಕೆ ಬಂದಾಗ ಗರಿಷ್ಠ ವೃದ್ಧಿ ವಿಪ್ರೋ ಪಾಲಾಗಿದೆ. ಅದು ಪ್ರಸಕ್ತ ವರ್ಷದಲ್ಲಿ ಶೇ.28.9ರ ಪ್ರಗತಿ ದಾಖಲಿಸಿದೆ. ಸಸ್ಕೇನ್ ಶೇ.26.8 ಹಾಗೂ ಸ್ಯೂಬೆಕ್ಸ್ ಶೇ.26.4ರ ಪ್ರಗತಿ ಹೊಂದಿದೆ.
ಇಲ್ಲಿ ಟೆಕ್ ಮಹೀಂದ್ರಾದ ಪಾಲು ಶೇ.18.5 ಮಾತ್ರ. ಇನ್ಫೋಸಿಸ್ ಮತ್ತು ಟಿಸಿಎಸ್‌ಗಳು ಪ್ರಗತಿ ವೃದ್ಧಿಸುವಲ್ಲಿ ವಿಫಲವಾಗಿವೆ. ಇವು ಕ್ರಮವಾಗಿ ಶೇ.8.9 ಮತ್ತು ಶೇ.6.4ರ ಪ್ರಗತಿಯನ್ನಷ್ಟೇ ದಾಖಲಿಸಿವೆ.
ಮಾರುಕಟ್ಟೆ ಕೂಡ ಸಾಕಷ್ಟು ಪ್ರಗತಿ ಸಾಧಿಸಿರುವುದು ಅಂಕಿ ಅಂಶಗಳಿಂದ ದೃಢಪಟ್ಟಿದೆ. 2006-07ರಲ್ಲಿ ಈ ಕ್ಷೇತ್ರವು 17,871 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿತ್ತು. ಅದು 2007-08ರ ಹೊತ್ತಿಗೆ 23,018 ಕೋಟಿಗಳಿಗೇರಿತ್ತು. ಈ ವರ್ಷ ಇದು 25,152 ಕೋಟಿ ರೂಪಾಯಿಗಳನ್ನು ತಲುಪಿದೆ.