ಮಳೆಯ ಅಸಹಜ ನಡೆಯಿಂದಾಗಿ ಪ್ರಸಕ್ತ ವರ್ಷ ಬೆಲೆಗಳು ಏರಿಕೆಯಾಗಬಹುದು ಎಂದು ಆರ್‌ಬಿಐ ಉಪ ಗವರ್ನರ್ ಕೆ.ಸಿ. ಚಕ್ರವರ್ತಿ ಭವಿಷ್ಯ ನುಡಿದಿದ್ದು, ದರಯೇರಿಕೆಯಿಂದ ತತ್ತರಿಸುತ್ತಿರುವ ಜನತೆಗೆ ಸದ್ಯದಲ್ಲಿ ನಿಟ್ಟುಸಿರು ಬಿಡಲು ಅವಕಾಶ ಸಿಗುವ ಸಾಧ್ಯತೆ ಕಡಿಮೆಯೆಂಬುದು ದೃಢವಾಗತೊಡಗಿದೆ.
ಮಳೆಯ ಅಸಹಜತೆಯಿಂದಾಗಿ ಹಣದುಬ್ಬರ ದರದ ಮೇಲೆ ಒತ್ತಡ ಬೀಳುವ ನಿರೀಕ್ಷೆಗಳಿವೆ ಎಂದು ವಿತ್ತ ಸಚಿವ ಪ್ರಣಬ್ ಮುಖರ್ಜಿ ಜತೆ ಗ್ರಾಮೀಣ ಬ್ಯಾಂಕ್‌ಗಳ ಪ್ರಾಂತ್ಯ ಮುಖ್ಯಸ್ಥರ ಸಭೆಯ ನಂತರ ಮಾತನಾಡುತ್ತಾ ಚಕ್ರವರ್ತಿ ತಿಳಿಸಿದ್ದಾರೆ.
ಈ ವರ್ಷ ಮಳೆಯ ಅಭಾವವನ್ನು ರೈತರು ಎದುರಿಸುತ್ತಿರುವುದರಿಂದ ಕೃಷಿ ಸಾಲಗಳನ್ನು ಯಾವಾಗ ಮರು ಪರಿಷ್ಕರಿಸಲಾಗುತ್ತದೆ ಎಂದು ಅವರನ್ನು ಪ್ರಶ್ನಿಸಿದ್ದಕ್ಕೆ, ಇದು ಮುಂದಿನ ವರ್ಷದ ವಿಚಾರ ಎಂದರು.
ವರದಿಗಳ ಪ್ರಕಾರ ದೇಶದಲ್ಲಿ ಜೂನ್ 1ರಿಂದ ಆಗಸ್ಟ್ 12ರ ಅವಧಿಯಲ್ಲಿ ಸಾಮಾನ್ಯಕ್ಕಿಂತ ತೀರಾ ಕಡಿಮೆ ಅಂದರೆ ಶೇ.29 ಮಾತ್ರ ಮಳೆ ಪ್ರಮಾಣ ದಾಖಲಾಗಿದೆ.
ಪವನಶಾಸ್ತ್ರ ಇಲಾಖೆಯು 2009ನ್ನು ಈಗಾಗಲೇ ಬರಪೀಡಿತ ವರ್ಷ ಎಂದು ಈಗಾಗಲೇ ಅಧಿಕೃತವಾಗಿ ಘೋಷಿಸಿದ್ದನ್ನೂ ಇಲ್ಲಿ ಸ್ಮರಿಸಬಹುದಾಗಿದೆ.
ಮಳೆಯ ಕೊರತೆಯಿಂದಾಗಿ ಬಿತ್ತನೆ ಕಾರ್ಯಗಳು ವಿಳಂಬ ಅಥವಾ ರದ್ದಾಗಿದ್ದು, ಮುಂಬರುವ ದಿನಗಳಲ್ಲಿ ಆಹಾರ ವಸ್ತುಗಳ ಬೆಲೆ ಭಾರೀ ಪ್ರಮಾಣದಲ್ಲಿ ಏರಿಕೆಯಾಗುವ ಭೀತಿಯನ್ನು ದೇಶ ಎದುರಿಸುತ್ತಿದೆ.
ಆಗಸ್ಟ್ 1ಕ್ಕೆ ಕೊನೆಗೊಂಡ ವಾರದಲ್ಲಿ ಹಣದುಬ್ಬರ ದರ ಶೇ.(-)1.74ಕ್ಕೆ ಮುಟ್ಟುವ ಮೂಲಕ ಮೂರು ದಶಕಗಳಲ್ಲೇ ಅತೀ ಕಡಿಮೆ ಎಂಬ ದಾಖಲೆ ನಿರ್ಮಿಸಿತ್ತು. ಧಾನ್ಯಗಳು, ಬೇಳೆಕಾಳುಗಳು, ಹಣ್ಣು-ಹಂಪಲು ಮತ್ತು ತರಕಾರಿಗಳು ಗರಿಷ್ಠ ಬೆಲೆಯಲ್ಲಿದ್ದ ಹೊರತಾಗಿಯೂ ಹಣದುಬ್ಬರ ದರ ಕುಸಿತ ಕಂಡಿತ್ತು.