ಮಾಹಿತಿ ತಂತ್ರಜ್ಞಾನ ಕ್ಷೇತ್ರ, ರಿಯಲ್ ಎಸ್ಟೇಟ್ ಮತ್ತು ರಖಂ ವ್ಯವಹಾರ ಕ್ಷೇತ್ರಗಳಲ್ಲಿ ಉದ್ಯೋಗಾವಕಾಶಗಳು ಹೆಚ್ಚಿದ್ದು, ಭಾರತದಲ್ಲಿನ ಒಟ್ಟಾರೆ ಉದ್ಯೋಗ ನೇಮಕಾತಿಯು ಜುಲೈ ತಿಂಗಳಲ್ಲಿ ಶೇ.1.3ರಷ್ಟು ಏರಿಕೆಯಾಗಿದೆ ಎಂದು 'ನೌಕರಿ.ಕಾಮ್' ನಡೆಸಿದ ಸಮೀಕ್ಷೆಯಲ್ಲಿ ಬಹಿರಂಗಪಡಿಸಿದೆ.
ನೌಕರಿ.ಕಾಮ್ ವೆಬ್‌ಸೈಟ್‌ನ ಉದ್ಯೋಗ ಸೂಚ್ಯಂಕವು ಜೂನ್ ತಿಂಗಳಿನಲ್ಲಿ ದಾಖಲಿಸಿದ್ದ ಪ್ರಮಾಣಕ್ಕಿಂತ ಶೇ.1.3ರ ಹೆಚ್ಚಳವನ್ನು ಜುಲೈಯಲ್ಲಿ ದಾಖಲಿಸಿದೆ. 718ರಲ್ಲಿದ್ದ ಉದ್ಯೋಗ ಪ್ರಮಾಣ ಸೂಚ್ಯಂಕವು ಜುಲೈಯಲ್ಲಿ 727ನ್ನು ತಲುಪಿದೆ ಎಂದು ನೌಕರಿ ಸಂಸ್ಥೆ ತಿಳಿಸಿದೆ.
ರಿಯಲ್ ಎಸ್ಟೇಟ್, ಸೆಮಿಕಂಡಕ್ಟರ್, ಬ್ಯಾಂಕಿಂಗ್, ಅಟೋಮೊಬೈಲ್ ಮತ್ತು ಮಾಹಿತಿ ತಂತ್ರಜ್ಞಾನ ಕ್ಷೇತ್ರಗಳು ಸುಧಾರಣೆಯ ಹಾದಿಯಲ್ಲಿದ್ದು, ಸೂಚ್ಯಂಕವು ಜೂನ್‌ನಲ್ಲಿ ಹೊಂದಿದ್ದ 686 ಅಂಕಗಳಿಂದ 703 ಅಂಕಗಳಿಗೆ ಜುಲೈ ತಿಂಗಳಲ್ಲಿ ಏರಿಕೆ ಕಂಡಿದೆ.
ಕಳೆದ ಕೆಲವು ತಿಂಗಳುಗಳಿಂದ ಸತತವಾಗಿ ಪ್ರೋತ್ಸಾಹದಾಯಕ ವಾತಾವರಣ ಉದ್ಯೋಗ ವಲಯದಲ್ಲಿ ಕಂಡು ಬಂದಿದೆ. ಐಟಿ, ರಿಯಲ್ ಎಸ್ಟೇಟ್, ಚಿಲ್ಲರೆ ವ್ಯಾಪಾರ ಮತ್ತು ಅಟೋಮೊಬೈಲ್ ವಿಭಾಗಗಳಲ್ಲಿ ಆಶಾದಾಯಕ ಪರಿಸ್ಥಿತಿಯಿದೆ. ಇದೇ ವಲಯಗಳಲ್ಲಿ ನೇಮಕಾತಿಯಲ್ಲಿ ಹೆಚ್ಚಿನ ವೃದ್ಧಿಯಾಗಿರುವುದು ಸಮೀಕ್ಷೆಯಿಂದ ದೃಢಗೊಂಡಿದೆ. ಇದೇ ಪರಿಸ್ಥಿತಿ ಇನ್ನು ಕೆಲವು ತಿಂಗಳುಗಳ ಕಾಲ ಮುಂದುವರಿದರೆ ಮತ್ತು ಮತ್ತಷ್ಟು ಪ್ರಗತಿ ಸಾಧಿಸಿದರೆ ಆರ್ಥಿಕ ಚೇತರಿಕೆ ಕಂಡಿದ್ದೇವೆ ಎಂಬುದನ್ನು ಖಚಿತಪಡಿಸಿಕೊಳ್ಳಬಹುದಾಗಿದೆ ಎಂದು ನೌಕರಿ.ಕಾಮ್ ಮಾಲಕ ಸುಮೀತ್ ಸಿಂಗ್ ತಿಳಿಸಿದ್ದಾರೆ.
ಜೂನ್‌ನಲ್ಲಿ ಅದಕ್ಕಿಂತ ಹಿಂದಿನ ತಿಂಗಳಿಗಿಂತ ಶೇ.8.1ರಷ್ಟು ನೇಮಕಾತಿ ಹೆಚ್ಚಳ ದಾಖಲಾಗಿತ್ತು. ಪ್ರಸಕ್ತ ಜುಲೈಯಲ್ಲಿ ಮಾಹಿತಿ ತಂತ್ರಜ್ಞಾನ ಕ್ಷೇತ್ರ ಸಾಫ್ಟ್‌ವೇರ್ ವಿಭಾಗವು ಶೇ.4ರಷ್ಟು ಹೆಚ್ಚು ನೇಮಕಾತಿ ಮಾಡಿಕೊಂಡಿದೆ. ಇದರ ಹಾರ್ಡ್‌ವೇರ್ ಮತ್ತು ನೆಟ್‌ವರ್ಕಿಂಗ್ ವಿಭಾಗವು ಶೇ.7 ಹಾಗೂ ಬಿಪಿಓಗಳು ಶೇ.3ರಷ್ಟು ನೇಮಕಾತಿ ಹೆಚ್ಚಳ ದಾಖಲಿಸಿವೆ.
ಅದೇ ಹೊತ್ತಿಗೆ ದೂರವಾಣಿ ಕ್ಷೇತ್ರವು ಶೇ.10ರ ಕುಸಿತ ದಾಖಲಿಸಿದ್ದು, ಹಿನ್ನಡೆಯೆಂದೇ ಭಾವಿಸಲಾಗಿದೆ. ಒಟ್ಟಾರೆ ಸಮೀಕ್ಷೆಯಲ್ಲಿ ದೆಹಲಿ, ಮುಂಬೈ ಮತ್ತು ಹೈದರಾಬಾದ್‌ಗಳು ಪ್ರಗತಿ ದಾಖಲಿಸಿದ್ದರೆ, ಬೆಂಗಳೂರು, ಚೆನ್ನೈ ಮತ್ತು ಪುಣೆಗಳು ಹಿನ್ನಡೆ ಕಂಡಿವೆ.
ಉದ್ಯೋಗ ನೇಮಕಾತಿಯಲ್ಲಿ ಬೆಂಗಳೂರು, ಚೆನ್ನೈ ಮತ್ತು ಪುಣೆಗಳು ಕ್ರಮವಾಗಿ ಶೇ.4, 6 ಮತ್ತು 1ರಷ್ಟು ಕುಸಿತ ಕಂಡಿವೆ. ದೆಹಲಿ ಶೇ.7 ಮತ್ತು ಮುಂಬೈ ಶೇ.3ರ ಏರಿಕೆ ದಾಖಲಿಸಿವೆ.