ವೇತನ ಹೆಚ್ಚಳ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ದೇಶಾದ್ಯಂತ ಭಾರತ ಸಂಚಾರ ನಿಗಮ (ಬಿಎಸ್‌ಎನ್‌ಎಲ್ ) ನೌಕರರು ಮಂಗಳವಾರ ಮಧ್ಯರಾತ್ರಿಯಿಂದ ಅವಳಿ ಮುಷ್ಕರ ಆರಂಭಿಸಿದ್ದಾರೆ.
ಒಂದೆಡೆ, ಟೆಲಿಕಾಂ ವಿಭಾಗದಿಂದ ಬೇರೆಡೆಗೆ ಹೋಗಿರುವ ಅಧಿಕಾರಿಗಳನ್ನು ಮರಳಿ ಕಂಪೆನಿಗೆ ಸೇರಿಸಿಕೊಳ್ಳಬೇಕು ಎಂದು ಆಗ್ರಹಿಸಿ ಬಿಎಸ್‌ಎನ್‌ಎಲ್‌ನ ಇಂಜಿನಿಯರ್‌ಗಳು ಅನಿರ್ಧಿಷ್ಠಾವಧಿ ಮುಷ್ಕರವನ್ನು ಹಮ್ಮಿಕೊಂಡಿದ್ದಾರೆ. ಇದೇ ವೇಳೆ ಬಿಎಸ್‌ಎನ್‌ಎಲ್‌ನ 7 ಯುನಿಯನ್‌ನ ಒಟ್ಟು 1.5 ಲಕ್ಷ ನೌಕರರು ವೇತನ ಪರಿಷ್ಕರಣೆಗೆ ಒತ್ತಾಯಿಸಿ ಎರಡು ದಿನಗಳ ಮುಷ್ಕರ ಆರಂಭಿಸಿದ್ದಾರೆ.
ಉನ್ನತ ಮಟ್ಟದ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಬಿಎಸ್‌ಎನ್‌ಎಲ್, ಶೇ.50 ರಿಂದ ಶೇ.70 ರಷ್ಟು ವೇತನ ಹೆಚ್ಚಳ ಮಾಡಿದೆ. ಉಳಿದವರಿಗೆ ಕೇವಲ ಶೇ.30 ರಷ್ಟು ವೇತನ ಹೆಚ್ಚಳ ನೀಡಲು ಕಂಪೆನಿ ನಿರ್ಧರಿಸಿದ್ದು,ತಾರತಮ್ಯ ಮಾಡುತ್ತಿದೆ ಎಂದು ನೌಕರರು ಆರೋಪಿಸಿದ್ದಾರೆ.
ಬಿಎಸ್‌ಎನ್‌ಎಲ್ ನೌಕರರ ಮುಷ್ಕರದಿಂದಾಗಿ ಗ್ರಾಹಕರು ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆಗಳಿವೆ. ಮುಷ್ಕರಕ್ಕಿಳಿದಿರುವ ಎಂಜಿನಿಯರ್‌ಗಳು ವಿವಿಧ ವಿಭಾಗಗಳಿಗೆ ಸೇರಿದವರಾಗಿದ್ದಾರೆ. ಜತೆಗೆ ನೌಕರರು ಮುಷ್ಕರಕ್ಕೆ ಇಳಿದಿರುವುದರಿಂದ ಸಂಪರ್ಕ ವ್ಯತ್ಯಯವಾಗಲಿದೆ ಎಂದು ಮೂಲಗಳು ತಿಳಿಸಿವೆ.