ಅಮೆರಿಕನ್ ಸರ್ಚ್ ಇಂಜಿನ್ ಮಾರುಕಟ್ಟೆಯ ಜುಲೈ ವರದಿಗಳ ಪ್ರಕಾರ, ಗೂಗಲ್ ಮತ್ತು ಯಾಹೂ ಸರ್ಚ್ ಇಂಜಿನ್‌ಗಳಿಂದ ಅಲ್ಪ ಪ್ರಮಾಣದ ಬಳಕೆದಾರರನ್ನು ಸೆಳೆಯಲು ಮೈಕ್ರೋಸಾಫ್ಟ್‌ನ 'ಬಿಂಗ್' ಯಶಸ್ವಿಯಾಗಿದೆ.
ಇತ್ತೀಚೆಗಷ್ಟೇ ಉದ್ಯಮವಲಯದ 'ಕಾಮ್‌ಸ್ಕೋರ್' ಈ ವರದಿಯನ್ನು ಬಿಡುಗಡೆ ಮಾಡಿದೆ. ಜೂನ್ ಆರಂಭದಲ್ಲಿ 'ಬಿಂಗ್' ಸರ್ಚ್ ಇಂಜಿನ್ ಬಿಡುಗಡೆ ಮಾಡಿದ್ದ ಮೈಕ್ರೋಸಾಫ್ಟ್ ಇದೀಗ ಶೇ.8.9ರ ಮಾರುಕಟ್ಟೆ ಪಾಲನ್ನು ಹೊಂದಿದೆ. ಜೂನ್ ತಿಂಗಳಲ್ಲಿ 8.4ರಲ್ಲಿದ್ದ ಬಿಂಗ್ ಪಾಲು ಜುಲೈ ತಿಂಗಳಿಗಾಗುವಾಗ ಶೇ.8.9ಕ್ಕೇರಿದೆ.
PR
ಶೋಧ ಮಾರುಕಟ್ಟೆಯ ದೈತ್ಯ ಗೂಗಲ್ ಶೇ.0.3 ಕಳೆದುಕೊಂಡು ಶೇ.64.7ಕ್ಕೆ ಕುಸಿತ ಕಂಡಿದೆ. ಎರಡನೇ ಸ್ಥಾನದಲ್ಲಿರುವ ಯಾಹೂ ಕೂಡ ಶೇ.0.3ರ ಕುಸಿತ ಕಂಡಿದ್ದು, ಈಗ ಅದರ ಮಾರುಕಟ್ಟೆ ಪಾಲು ಶೇ.19.3.
ಒಟ್ಟಾರೆ ಶೋಧ ಪ್ರಮಾಣವು ಸತತ ಮೂರನೇ ತಿಂಗಳಲ್ಲೂ ತನ್ನ ಕುಸಿತ ಮುಂದುವರಿಸಿದೆ. ಜುಲೈ ತಿಂಗಳಲ್ಲಿ ಅಮೆರಿಕಾ ಒಟ್ಟು 1360 ಕೋಟಿ ಶೋಧವನ್ನಷ್ಟೇ ಸೆಳೆಯಲು ಸಫಲವಾಗಿದೆ. ಜೂನ್ ತಿಂಗಳಲ್ಲಿ ಇದು 1400 ಕೋಟಿಯಾಗಿತ್ತು.
1360 ಕೋಟಿ ಶೋಧದಲ್ಲಿ ಗೂಗಲ್ ಪಾಲು 890 ಕೋಟಿ. ಯಾಹೂ 260 ಕೋಟಿ ಹಾಗೂ ಬಿಂಗ್ 120 ಕೋಟಿ ಶೋಧವನ್ನು ಪಡೆದಿವೆ. ಇತರ ಸರ್ಚ್ ಇಂಜಿನ್‌ಗಳು ಉಳಿದ ಪಾಲನ್ನು ಪಡೆದಿವೆ.
ಕಳೆದ ತಿಂಗಳು ಮೈಕ್ರೋಸಾಫ್ಟ್ ಮತ್ತು ಯಾಹೂ ಕಂಪನಿಗಳು ಶೋಧದಲ್ಲಿನ ಜಾಹೀರಾತು ಹಂಚಿಕೆ ಕುರಿತು ಒಪ್ಪಂದ ಮಾಡಿಕೊಂಡಿದ್ದು, ಎರಡೂ ಕಂಪನಿಗಳ ವೆಬ್‌ಸೈಟ್‌ಗಳಲ್ಲಿ ಬಿಂಗ್ ಸರ್ಚ್ ಇಂಜಿನನ್ನು ಬಳಸಿಕೊಳ್ಳಲು ಒಪ್ಪಿಕೊಂಡಿವೆ. ಆದರೆ ಇದು 2012ರಲ್ಲಷ್ಟೇ ಜಾರಿಗೆ ಬರಬಹುದು ಎಂದು ಹೇಳಲಾಗುತ್ತಿದೆ.