ದೇಶದಲ್ಲಿನ ಸುಮಾರು 10 ರಾಜ್ಯಗಳಲ್ಲಿ ಬರಗಾಲ ಬಾಧಿಸುತ್ತಿದ್ದು, ಒಟ್ಟು 246 ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ ಎಂದು ಕೇಂದ್ರ ಕೃಷಿ ಸಚಿವಾಲಯ ತಿಳಿಸಿದೆ.
ಅಸ್ಸಾಮ್, ಹಿಮಾಚಲ ಪ್ರದೇಶ, ಜಾರ್ಖಂಡ್, ಮಣಿಪುರ ಮತ್ತು ನಾಗಾಲ್ಯಾಂಡ್‌ನಲ್ಲಿನ ಎಲ್ಲಾ ಜಿಲ್ಲೆಗಳು ಬರಪೀಡಿತವೆಂದು ಗುರುತಿಸಲಾಗಿದೆ. ಈ ಐದು ರಾಜ್ಯಗಳು ಸಂಪೂರ್ಣ ಬರಗಾಲವನ್ನು ಎದುರಿಸುತ್ತಿವೆ ಎಂದು ಸಚಿವಾಲಯ ವಿವರಿಸಿದೆ.
ಉತ್ತರ ಪ್ರದೇಶ, ಬಿಹಾರ, ಮಹಾರಾಷ್ಟ್ರ, ಮಧ್ಯಪ್ರದೇಶ ಮತ್ತು ಕರ್ನಾಟಕಗಳಲ್ಲಿನ ಹಲವು ಜಿಲ್ಲೆಗಳನ್ನು ಕೂಡ ಬರಪೀಡಿತ ಎಂದು ಪ್ರಕಟಿಸಲಾಗಿದೆ. ಇವುಗಳಲ್ಲಿ ಕೆಲವು ರಾಜ್ಯಗಳು ಅರ್ಧದಷ್ಟು ಬರಪೀಡಿತವಾಗಿದ್ದರೆ, ಇನ್ನು ಕೆಲವು ಮೂರನೇ ಎರಡು ಭಾಗದಷ್ಟು ಬರಗಾಲವನ್ನೆದುರಿಸುತ್ತಿವೆ ಎಂದು ಸಚಿವಾಲಯ ತಿಳಿಸಿದೆ.
10 ರಾಜ್ಯಗಳ 246 ಜಿಲ್ಲೆಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಅಂದರೆ ದೇಶದ ಒಟ್ಟು ಜಿಲ್ಲೆಗಳಲ್ಲಿ ಶೇ.46ರಿಂದ 47ರಷ್ಟು ಜಿಲ್ಲೆಗಳು ಬರಪೀಡಿತವಾಗಿವೆ. ಈ ವರ್ಷ ಶೇ.29ರಷ್ಟು ಮಳೆಯ ಅಭಾವ ಕಂಡು ಬಂದಿದೆ. ಹಾಗಾಗಿ ಹಲವು ರಾಜ್ಯಗಳಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತವಾಗಿವೆ ಎಂದು ಕೃಷಿ ಸಚಿವ ಶರದ್ ಪವಾರ್ ತಿಳಿಸಿದ್ದಾರೆ.
ಅದೇ ಹೊತ್ತಿಗೆ ಒರಿಸ್ಸಾ ಮತ್ತು ಉತ್ತರ ಬಂಗಾಲದ ಕರಾವಳಿಯಲ್ಲಿ ವಾಯುಭಾರ ನಿಮ್ನತೆ ಆವರಿಸಿರುವ ಕಾರಣ ಇದೇ ತಿಂಗಳ 24ರಿಂದ ಮಳೆಯಾಗುವ ನಿರೀಕ್ಷೆಗಳಿವೆ ಎಂದು ಹವಾಮಾನ ಇಲಾಖೆಯು ಮತ್ತೊಮ್ಮೆ ಭರವಸೆಯ ಹೊಳೆಯನ್ನು ಹರಿಸಿದೆ.
ಭಾರತದ ಉತ್ತರ ಮತ್ತು ವಾಯುವ್ಯಗಳಲ್ಲಿ ಕಳೆದ ನಾಲ್ಕೈದು ದಿನಗಳಿಂದ ಸತತ ಮಳೆಯಾಗುತ್ತಿರುವ ಕಾರಣ ಮಳೆ ಅಭಾವ ಪ್ರಮಾಣವು ಶೇ.29ರಿಂದ 27ಕ್ಕೆ ಇಳಿಕೆ ಕಂಡಿದ ಎಂದೂ ಇಲಾಖೆ ತಿಳಿಸಿದೆ.
ದೇಶದ ಬಹುತೇಕ ಕಡೆ ಮಳೆ ಅಭಾವದಿಂದಾಗಿ ಬಿತ್ತನೆ ಕಾರ್ಯಗಳು ಸ್ಥಗಿತಗೊಂಡಿವೆ. ಈಗಾಗಲೇ ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಜನಸಾಮಾನ್ಯರು ಮುಂಬರುವ ದಿನಗಳಲ್ಲಿ ಮತ್ತಷ್ಟು ಸಂಕಷ್ಟವನ್ನೆದುರಿಸಬೇಕಾಗಬಹುದು ಎಂದು ಈಗಾಗಲೇ ಭಾರತೀಯ ರಿಸರ್ವ್ ಬ್ಯಾಂಕ್ ಎಚ್ಚರಿಕೆ ನೀಡಿದೆ.