ಅಂತ್ಯಾಕ್ಷರಿ ಆಟವನ್ನು ಬಹುತೇಕ ಭಾರತೀಯರು ಇಷ್ಟಪಡುತ್ತಿರುವುದನ್ನು ಮನಗಂಡಿರುವ ರಿಲಯೆನ್ಸ್ ಮೊಬೈಲ್ ಇದೀಗ ಅದನ್ನು ಗೇಮ್ ಆಗಿ ಪರಿವರ್ತಿಸಿ ತನ್ನ ಗ್ರಾಹಕರಿಗೆ ನೀಡುವ ಯೋಜನೆಗೆ ಕೈ ಹಾಕಿದೆ.
ರಿಲಯೆನ್ಸ್ ತನ್ನ ಜಿಎಸ್‌ಎಂ ಮತ್ತು ಸಿಡಿಎಂಎ ಬಳಕೆದಾರರಿಗೆ ಆರ್-ವರ್ಲ್ಡ್ ಮೂಲಕ 'ಅಂತ್ಯಾಕ್ಷರಿ'ಯನ್ನು ನೀಡಲಿದೆ. ಗೇಮನ್ನು ಮೊಬೈಲಿಗೆ ಅಳವಡಿಸಿಕೊಂಡ ನಂತರ ಇದೇ ಸೇವೆ ಪಡೆದುಕೊಂಡಿರುವ ಗೆಳೆಯರೊಂದಿಗೆ ಅಥವಾ ಇತರ ರಿಲಯೆನ್ಸ್ ಬಳಕೆದಾರರ ಜತೆ 'ಅಂತ್ಯಾಕ್ಷರಿ' ಆಡಬಹುದು.
ಇದಕ್ಕಾಗಿ ರಿಲಯೆನ್ಸ್ ಪ್ರತ್ಯೇಕ ಮಾರ್ಕೆಟಿಂಗ್ ವೆಬ್ ಬಳಸಲಿದೆ. ಇಲ್ಲಿ 50-50, ಗೆಳೆಯನಿಗೆ ತಿಳಿಸಿ, ಲೈಬ್ರೆರಿ ಎಂಬ ಮೂರು ವಿಭಾಗಗಳು ಮೂಡಿ ಬರುವ ಸಾಧ್ಯತೆಗಳಿವೆ ಎಂದು ಸಂಸ್ಥೆ ತಿಳಿಸಿದೆ.
ಅಂತ್ಯಾಕ್ಷರಿಯೆನ್ನುವುದು ಭಾರತದ ಪುರಾತನ ಆಟ. ಈ ಆಟವನ್ನು ನಾವು ಆರಂಭಿಸಿದ ಮೇಲೆ ನಮ್ಮ ಗ್ರಾಹಕರು ದೇಶದ ಯಾವುದೇ ಭಾಗದಲ್ಲಿನ ಇತರ ರಿಲಯೆನ್ಸ್ ಬಳಕೆದಾರರೊಂದಿಗೆ ಆಡಬಹುದಾಗಿದೆ ಎಂದು ರಿಲಯೆನ್ಸ್ ಕಮ್ಯೂನಿಕೇಷನ್ಸ್‌ನ ಮುಖ್ಯಸ್ಥ ಕೃಷ್ಣ ದಾರ್ಭಾ ವಿವರಿಸಿದ್ದಾರೆ.
ಅಂದ ಹಾಗೆ ಇದನ್ನು ರಿಲಯೆನ್ಸ್ ತನ್ನ ಗ್ರಾಹಕರಿಗೆ ಉಚಿತವಾಗಿ ನೀಡುತ್ತಿಲ್ಲ. ಪ್ರತೀ ದಿನಕ್ಕೆ 1 ರೂಪಾಯಿಯಂತೆ ತಿಂಗಳಿಗೆ 30 ರೂಪಾಯಿಗಳನ್ನು ವಿಧಿಸಲಾಗುತ್ತದೆ. ಜತೆಗೆ 30 ನಿಮಿಷಗಳ ಉಚಿತ ಬಳಕೆಯ ಕೊಡುಗೆಯನ್ನೂ ನೀಡುವುದಾಗಿ ಕಂಪನಿ ಪ್ರಕಟಿಸಿದೆ.
ಈ ಸೇವೆಯ ಚಂದಾದಾರರು ತಮ್ಮ ಆಟಗಾರರ ಪಟ್ಟಿಗೆ ಇತರರನ್ನು ಸೇರಿಸಿಕೊಳ್ಳಬಹುದು ಮತ್ತು ತಾವು ಹಾಡಿದ ಹಾಡನ್ನು ಅವರಿಗೆ ಕಳುಹಿಸಬಹುದಾಗಿದೆ. ಅಂತ್ಯಾಕ್ಷರಿ ಸ್ಪರ್ಧೆ ನಡೆಯುತ್ತಿರುವ ಸಂದರ್ಭದಲ್ಲಿ ಇತರರಿಂದ ಸಹಾಯ ಬೇಡವಾದಲ್ಲಿ ತಡೆಯಲು ಅಥವಾ ಬೇಕಾದಲ್ಲಿ ಪಡೆಯಲು ಕೂಡ ಅವಕಾಶಗಳಿವೆ.