ಗೂಗಲ್‌ನ ಉಚಿತ ಮೊಬೈಲ್ ಆಪರೇಟಿಂಗ್ ಸಿಸ್ಟಮ್ 'ಅಂಡ್ರಾಯ್ಡ್' ಬಿಡುಗಡೆಯಾದ ನಂತರ ಪ್ರಬಲ ಪೈಪೋಟಿ ನೀಡುವ ಸಲುವಾಗಿ ಸಾಫ್ಟ್‌ವೇರ್ ದಿಗ್ಗಜ ಮೈಕ್ರೋಸಾಫ್ಟ್, ಮೊಬೈಲ್ ಹ್ಯಾಂಡ್‌ಸೆಟ್ ಕ್ಷೇತ್ರದ ದೈತ್ಯ ನೋಕಿಯಾ ಜತೆ ಕೈ ಜೋಡಿಸಿತ್ತು. ಬೆನ್ನಿಗೆ ಹೇಳಿಕೆ ನೀಡಿರುವ ಮೈಕ್ರೋಸಾಫ್ಟ್ ಇಂಡಿಯಾದ ವ್ಯವಸ್ಥಾಪಕ ನಿರ್ದೇಶಕರು, ಮುಂದಿನ 12 ತಿಂಗಳುಗಳಲ್ಲಿ ಹಲವು ಉತ್ಪನ್ನಗಳನ್ನು ನಾವು ಮಾರುಕಟ್ಟೆಗೆ ತರಲಿದ್ದೇವೆ ಎಂದಿದ್ದಾರೆ.
ಆದರೆ ಗೂಗಲ್ ಜತೆಗಿನ ಸಮರ ನಿರಾಕರಿಸಿರುವ ಮೈಕ್ರೋಸಾಫ್ಟ್ ಇಂಡಿಯಾದ ಮುಖ್ಯಸ್ಥ ರಾಜನ್ ಅನಂದನ್, ಇದು ಕೇವಲ ಆರೋಗ್ಯಕರ ಸ್ಪರ್ಧೆ ಎಂದಷ್ಟೇ ಹೇಳಿದ್ದಾರೆ.
ಈಗ ಸಾಫ್ಟ್‌ವೇರ್ ಉದ್ಯಮದಲ್ಲಿ ಹಲವು ಮಂದಿ ಪೈಪೋಟಿ ನೀಡುತ್ತಿದ್ದಾರೆ. ಇದು ಆರೋಗ್ಯಕರ ಸ್ಪರ್ಧೆಗೆ ಉತ್ತಮ ಬೆಳವಣಿಗೆ. ಪೈಪೋಟಿಯಿಂದಾಗಿ ಹೊಸತರ ಹುಟ್ಟು ಸಾಧ್ಯವಾಗುತ್ತದೆ. ನಾವು ಗೂಗಲ್ ಜತೆ ಸರ್ಚ್ ಮತ್ತು ಇತರ ವಿಚಾರಗಳಲ್ಲಿ ಪೈಪೋಟಿ ನೀಡುತ್ತಿದ್ದೇವೆ ಎಂದು ಅವರು ತಿಳಿಸಿದರು.
ಮುಂಬರುವ ದಿನಗಳಲ್ಲಿ ಸಂಸ್ಥೆಯು ಹಲವು ಯೋಜನೆಗಳನ್ನು ಪರಿಚಯಿಸಲಿದೆ ಎಂದು ಮಾಹಿತಿ ನೀಡಿದ ಅವರು, 'ಮುಂದಿನ 12 ತಿಂಗಳುಗಳ ಅವಧಿಯಲ್ಲಿ ನಾವು ಹೊಸ ಉತ್ಪಾದನೆಗಳನ್ನು ತರಲಿದ್ದೇವೆ. 2010ರ ಮಧ್ಯದಲ್ಲಿ ನಾವು ಮೈಕ್ರೋಸಾಫ್ಟ್ ಆಫೀಸ್ 2010ನ್ನು ಬಿಡುಗಡೆಗೊಳಿಸುತ್ತೇವೆ' ಎಂದರು.
ವಿಂಡೋಸ್ 7 ನಮ್ಮ ಮತ್ತೊಂದು ಮಹತ್ವದ ಹೆಜ್ಜೆ. ಅದರ ಮೇಲೆ ಕೂಡ ಅಪಾರ ಭರವಸೆ ಇಟ್ಟುಕೊಂಡಿದ್ದೇವೆ ಎಂದು ಆನಂದನ್ ತಿಳಿಸಿದ್ದಾರೆ.
ಗೂಗಲ್ ತನ್ನ 'ಅಂಡ್ರಾಯ್ಡ್' ಮೊಬೈಲ್ ನಿರ್ವಹಣಾ ಸಾಫ್ಟ್‌ವೇರನ್ನು 2008ರಲ್ಲಿ ಮುಕ್ತ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇದಕ್ಕೆ ಉತ್ತರವಾಗಿ ಮೈಕ್ರೋಸಾಫ್ಟ್ ಸಂಸ್ಥೆಯು ನೋಕಿಯಾ ಜತೆ ಕೈ ಸೇರಿಸಿದೆ.
ಕಳೆದ ವಾರ ಫಿನ್‌ಲ್ಯಾಂಡ್ ಮೂಲದ ಮೊಬೈಲ್ ಸಂಸ್ಥೆಯೊಂದಿಗೆ ಮೈಕ್ರೋಸಾಫ್ಟ್ ಹೊಸ ಒಪ್ಪಂದಕ್ಕೆ ಸಹಿ ಹಾಕಿದೆ. ಹಾಗಾಗಿ ಇನ್ನು ನೋಕಿಯಾ ಮೊಬೈಲ್‌ನಲ್ಲಿ ವರ್ಡ್, ಎಕ್ಸೆಲ್, ಪವರ್ ಪಾಯಿಂಟ್ ಮುಂತಾದ ಎಂಎಸ್ ಆಫೀಸ್ ಸಾಫ್ಟ್‌ವೇರ್‌ಗಳು ಲಭ್ಯವಾಗಲಿವೆ. ಇದರೊಂದಿಗೆ ಗೂಗಲ್ ಮತ್ತು ಮೈಕ್ರೋಸಾಫ್ಟ್ ನಡುವಿನ ಛಾಯಾ ಸಮರ ಮೊಬೈಲ್ ಜಗತ್ತಿಗೂ ಪಸರಿಸಿದಂತಾಗಿದೆ.