ರಾಷ್ಟ್ರ ರಾಜಧಾನಿಯಲ್ಲಿ ಕಳೆದ ವರ್ಷ ಘಟಿಸಿದ 12,000 ರಸ್ತೆ ಅಪಘಾತಗಳಲ್ಲಿ ಶೇ.65ರಷ್ಟು ಪ್ರಕರಣಗಳು ಚಾಲಕರು ಪಾನಮತ್ತರಾಗಿದ್ದರಿಂದ ಸಂಭವಿಸಿದೆ ಎಂದು ಸರಕಾರೇತರ ಸಂಘಟನೆಯೊಂದು ಸಿದ್ಧಪಡಿಸಿದ ವರದಿಯಲ್ಲಿ ತಿಳಿಸಿದೆ.
ಪಾನಮತ್ತರಾಗಿ ವಾಹನ ಚಲಾಯಿಸುವುದರ ವಿರುದ್ಧ ಅರಿವು ಮೂಡಿಸುವ ಸಂಘಟನೆ (ಸಿಎಡಿಡಿ)ಯು ಸಿದ್ಧಪಡಿಸಿರುವ 'ದೆಹಲಿ ಕುಡುಕ ಚಾಲಕರ ವರದಿ-2009'ನಲ್ಲಿ ಇದನ್ನು ಬಹಿರಂಗಪಡಿಸಿದೆ. ಅದರ ಪ್ರಕಾರ ದೆಹಲಿಯಲ್ಲಿ ಪ್ರತೀ ವರ್ಷ ಕುಡಿದು ವಾಹನ ಚಲಾಯಿಸುವುದರಿಂದಾಗಿ 1,500 ಮಂದಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ.
ಪಾನಮತ್ತ ಯುವಕರು, ಬಾಡಿಗೆ ಚಾಲಕರು, ಶಾಲಾ ಮಕ್ಕಳು, ಮಹಿಳೆಯರು ಮತ್ತು ನಗರದ ಪಬ್ ಸಂಸ್ಕೃತಿಯಿಂದಾಗಿ ಬೆರಗುಗೊಳಿಸುವ ಅವಘಡಗಳು ಸಂಭವಿಸುತ್ತಿರುವುದನ್ನು ನಾವು ವರದಿ ಸಂದರ್ಭದಲ್ಲಿ ಕಂಡುಕೊಂಡಿದ್ದೇವೆ ಎಂದು ಸಿಎಡಿಡಿ ಸಂಸ್ಥಾಪಕ ಪ್ರಿನ್ಸ್ ಸಿಂಘಾಲ್ ತಿಳಿಸಿದ್ದಾರೆ.
ಈ ವರದಿಯ ಪ್ರಕಾರ ರಾತ್ರಿ ಹೊತ್ತಿನಲ್ಲಿ ದೆಹಲಿಯಲ್ಲಿ ವಾಹನ ಚಲಾಯಿಸುವ 10 ಮಂದಿಯಲ್ಲಿ ಮೂವರು ಪಾನಮತ್ತರಾಗಿರುತ್ತಾರೆ. ಅವರನ್ನು ಪತ್ತೆ ಹಚ್ಚಿ ಶಿಕ್ಷಿಸುವ ಕಾರ್ಯವೂ ಸರಿಯಾಗಿ ನಡೆಯುತ್ತಿಲ್ಲ ಎಂದು ವರದಿ ವಿವರಿಸಿದೆ.
ಕುಡುಕ ಚಾಲಕರು ಟ್ರಾಫಿಕ್ ನಿಯಮಗಳನ್ನು ಕೂಡ ಪಾಲಿಸುವುದಿಲ್ಲ. ಸೀಟ್ ಬೆಲ್ಟ್ ಕಟ್ಟಿಕೊಳ್ಳುವುದು, ಮೊಬೈಲ್ ಫೋನ್ ಬಳಕೆ, ಅನಿಯಂತ್ರಿತ ವೇಗದಲ್ಲಿ ವಾಹನ ಓಡಿಸುವುದು, ಕೆಂಪು ದೀಪ ಸೂಚನೆಗಳನ್ನು ನಿರ್ಲಕ್ಷಿಸುವುದು ಮುಂತಾದ ಸುರಕ್ಷತಾ ನಿಯಮಗಳ ಉಲ್ಲಂಘಟನೆಯಲ್ಲೂ ಕುಡುಕ ಚಾಲಕರು ಮುಂದಿದ್ದಾರೆ ಎಂದು ವರದಿ ತಿಳಿಸಿದೆ.
ಇಂತಹ ಕಾರಣಗಳಿಂದ ನಡೆಯುವ ರಸ್ತೆ ಅಪಘಾತಗಳಲ್ಲಿ ಹೆಚ್ಚಾಗಿ ಐದರೊಳಗಿನ ಮಕ್ಕಳು ಮತ್ತು 21ರಿಂದ 34ರ ಹರೆಯದವರು ಸಾವನ್ನಪ್ಪುತ್ತಾರೆ. ಸರಕಾರಿ ಆಸ್ಪತ್ರೆಗಳಲ್ಲಿ ಅಪಘಾತದ ಗಾಯಾಳುಗಳು ಶೇ.17ರಷ್ಟು ಜಾಗವನ್ನು ಆಕ್ರಮಿಸಿಕೊಂಡಿರುತ್ತಾರೆ. ಇದಕ್ಕೆ ಕಾರಣ ಪಾನಮತ್ತರಾಗಿ ವಾಹನ ಚಲಾಯಿಸುವುದು.
ಅಲ್ಲದೆ ನಗರದಲ್ಲಿ ಹೆಚ್ಚಾಗಿರುವ ಪಬ್ ಸಂಸ್ಕೃತಿಯೂ ಇದಕ್ಕೆ ತನ್ನದೇ ಆದ ಕೊಡುಗೆ ನೀಡಿದೆ. 16ರಿಂದ 25ರ ನಡುವಿನವರಲ್ಲಿ ಶೇ.40ರಷ್ಟು ಯುವಕ-ಯುವತಿಯರು ರಸ್ತೆ ಅಥವಾ ಕಾರುಗಳಲ್ಲಿ, ವೈನ್ ಅಂಗಡಿಗಳ ಪಕ್ಕ, ಪೆಟ್ರೋಲ್ ಪಂಪ್‌ಗಳಲ್ಲಿ, ಪಾರ್ಕ್‌ಗಳಲ್ಲಿ ಮತ್ತು ಮಾರುಕಟ್ಟೆ ಪ್ರದೇಶಗಳಲ್ಲಿ ಮದ್ಯಪಾನ ಮಾಡುತ್ತಾರೆ ಎಂದು ಈ ಸಮೀಕ್ಷೆ ಬಹಿರಂಗಪಡಿಸಿದೆ.
26ರಿಂದ 30ರ ಹರೆಯದ ನಡುವಿನ ಮಹಿಳೆಯರಲ್ಲಿ ಕುಡಿದು ವಾಹನ ಚಲಾಯಿಸುವವರ ಪ್ರಮಾಣವು 2001ರಲ್ಲಿ ಶೇ.24.1ರಷ್ಟಿದ್ದದ್ದು, 2008ರಲ್ಲಿ ಶೇ.41ಕ್ಕೇರಿದೆ ಎಂದೂ ವರದಿ ಆತಂಕ ವ್ಯಕ್ತಪಡಿಸಿದೆ.