ಮಳೆ ಅಭಾವದಿಂದ ಹಲವು ರಾಜ್ಯಗಳಲ್ಲಿ ಕೃಷಿ ಚಟುವಟಿಕೆಗಳು ಸ್ಥಗಿತಗೊಂಡಿರುವ ಹಿನ್ನಲೆಯಲ್ಲಿ ಆಹಾರ ವಸ್ತುಗಳ ಬೆಲೆ ಗಗನಕ್ಕೇರುತ್ತಿದ್ದು, ಈ ಅವಧಿಯಲ್ಲಿ ಅಕ್ಕಿ ಉತ್ಪಾದನೆ ಒಂದು ಕೋಟಿ ಟನ್ ಕುಸಿಯುವ ಸಾಧ್ಯತೆಯಿದೆ; ಆದ್ದರಿಂದ ಅಕ್ಕಿ ದರ ಮತ್ತಷ್ಟು ಏರಿಕೆಯಾಗಬಹುದು ಎಂದು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ತಿಳಿಸಿದ್ದಾರೆ.
ದೇಶದ ಮೂರನೇ ಒಂದು ಭಾಗ ಬರಗಾಲ ಪೀಡಿತವಾಗಿದ್ದು, ಸರಕಾರವು ಸಾರ್ವಜನಿಕ ವಿತರಣಾ ವ್ಯವಸ್ಥೆ ಮತ್ತು ಮಾರುಕಟ್ಟೆಯಲ್ಲಿ ಮಧ್ಯ ಪ್ರವೇಶಿಸುವ ಮೂಲಕ ಬೆಲೆ ನಿಯಂತ್ರಿಸಲು ಮುಂದಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಮಳೆಯ ಅಭಾವದಿಂದಾಗಿ ಭತ್ತದ ಬೆಲೆ ಕಡಿಮೆಯಾಗಲಿದೆ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ 5.7 ಮಿಲಿಯನ್ ಹೆಕ್ಟೇರುಗಳಷ್ಟು ಪ್ರದೇಶದಲ್ಲಿ ಬೆಳೆ ಸಾಧ್ಯವಿಲ್ಲ. ಇದರ ಪರಿಣಾಮ 10 ಮಿಲಿಯನ್ ಟನ್‌ಗಳಷ್ಟು ಅಕ್ಕಿ ಉತ್ಪಾದನೆ ಕಡಿಮೆಯಾಗಬಹುದು ಎಂದು ರಾಜ್ಯ ಆಹಾರ ಸಚಿವರುಗಳ ಸಭೆಯಲ್ಲಿ ಮಾತನಾಡುತ್ತಾ ಕೇಂದ್ರ ಕೃಷಿ ಹಾಗೂ ಆಹಾರ ಖಾತೆ ಸಚಿವ ಪವಾರ್ ಅಭಿಪ್ರಾಯಪಟ್ಟರು.
ಭಾರತವು ಕಳೆದ ಅವಧಿಯ 84.58 ಮಿಲಿಯನ್ ಟನ್ ಸೇರಿದಂತೆ, 2008-09ರ ಸಾಲಿನಲ್ಲಿ 99.15 ಮಿಲಿಯನ್ ಟನ್ ಅಕ್ಕಿ ಉತ್ಪಾದಿಸಿದೆ.
ಮುಂಗಾರು ಬೆಳೆಯಲ್ಲಿ ಕುಸಿತವಾಗಿರುವುದನ್ನು ತಾನು ಗಮನಿಸಿದ್ದು, ಉತ್ಪಾದನಾ ಮಟ್ಟವು ಕಡಿಮೆಯಾಗಲಿದೆ. ಇದರಿಂದಾಗಿ ಆಹಾರ ವಸ್ತುಗಳ ಬೆಲೆ ಕೂಡ ಹೆಚ್ಚಾಗಬಹುದು. ಬೆಲೆಯೇರಿಕೆ ನಿಯಂತ್ರಿಸಲು ಪೂರಕ ಕ್ರಮಗಳನ್ನು ಕೇಂದ್ರ ಕೈಗೊಳ್ಳಲಿದೆ ಎಂದರು.
ಅಗತ್ಯ ಬಿದ್ದರೆ ಸರಕಾರವು ಮುಕ್ತ ಮಾರುಕಟ್ಟೆ ಮಧ್ಯ ಪ್ರವೇಶಕ್ಕೂ ಹಿಂದೇಟು ಹಾಕದು. ಗೋಧಿ ಮತ್ತು ಅಕ್ಕಿಯನ್ನು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಬಗ್ಗೆ ಗಮನಿಸಲಾಗುತ್ತಿದೆ ಎಂದು ಪವಾರ್ ವಿವರಿಸಿದ್ದಾರೆ.
ದೇಶದಲ್ಲಿ ಸಾಮಾನ್ಯ ಪ್ರಮಾಣಕ್ಕಿಂತ ಶೇ.29ರಷ್ಟು ಕಡಿಮೆ ಮಳೆಯಾಗಿದ್ದು, ಎಣ್ಣೆಬೀಜ ಮತ್ತು ಕಬ್ಬು ಬೆಳೆಗಳಲ್ಲಿ ಕೂಡ ಕಡಿಮೆ ಫಲಿತಾಂಶ ಬರಬಹುದು ಎಂದು ಸಚಿವರು ಆತಂಕ ವ್ಯಕ್ತಪಡಿಸಿದ್ದಾರೆ.