ಫೋರ್ಬ್ಸ್ ನಿಯತಕಾಲಿಕದ ಪ್ರಭಾವಿ ಮಹಿಳೆಯರ ಪಟ್ಟಿಯ ಅಗ್ರ ಸ್ಥಾನದಲ್ಲಿ ಜರ್ಮನ್ ಮುಖ್ಯಸ್ಥೆ ಅಂಜೆಲಾ ಮೆರ್ಕೆಲ್ ಸತತ ನಾಲ್ಕನೇ ಬಾರಿ ಕಾಣಿಸಿಕೊಂಡಿದ್ದಾರೆ. ಭಾರತದ ಇಂದ್ರಾ ನೂಯಿಯವರದ್ದು ಇಲ್ಲಿ ಮೂರನೇ ಸ್ಥಾನ.
ಅಮೆರಿಕಾದ ಪ್ರಥಮ ಮಹಿಳೆ ಮಿಚ್ಚೆಲ್ ಒಬಾಮಾ ಮತ್ತು ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅಗ್ರ 30ರೊಳಗೆ ಪ್ರವೇಶಿಸಲು ಕೂಡ ಸಾಧ್ಯವಾಗಿಲ್ಲ.
ಬುಧವಾರ ಪ್ರಕಟಿಸಲಾಗಿರುವ ಈ ಪಟ್ಟಿಯಲ್ಲಿ ಸತತ ನಾಲ್ಕನೇ ವರ್ಷ ಮೆರ್ಕೆಲ್ ಅಗ್ರ ಸ್ಥಾನವನ್ನು ಕಾಯ್ದುಕೊಂಡಿದ್ದಾರೆ. ಜರ್ಮನಿಯ ಅರ್ಥ ವ್ಯವಸ್ಥೆಯಲ್ಲಿ ಅವರ ಪಾತ್ರವನ್ನು ಫೋರ್ಬ್ಸ್ ಗುರುತಿಸಿಸಿದೆ. ಪ್ರಸಕ್ತ ವರ್ಷದ ಸೆಪ್ಟೆಂಬರ್‌ನಲ್ಲಿ ಅವರು ಮರು ಚುನಾವಣೆ ಎದುರಿಸುವ ಸಾಧ್ಯತೆಗಳಿವೆ.
ಅಮೆರಿಕಾ ಬ್ಯಾಂಕುಗಳಿಗೆ ಇನ್ಶೂರ್ ನೀಡುವ ಫೆಡರಲ್ ಡೆಪಾಸಿಟ್ ಇನ್ಸೂರೆನ್ಸ್ ಕಾರ್ಪೊರೇಷನ್ ಅಧ್ಯಕ್ಷೆ ಶೀಲಾ ಬೇರ್ ಎರಡನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
ಪೆಪ್ಸಿಕೋ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕಿ ಇಂದ್ರಾ ನೂಯಿ ಮೂರನೇ ಸ್ಥಾನದಲ್ಲಿದ್ದಾರೆ. ಅವರು 2008ರ ಪಟ್ಟಿಯಲ್ಲೂ ಇದೇ ಸ್ಥಾನದಲ್ಲಿದ್ದರು.
ಆಂಗ್ಲೋ ಅಮೆರಿಕನ್ ಗಣಿಗಾರಿಕಾ ದೈತ್ಯ ಸಂಸ್ಥೆಯ ಪ್ರಧಾನ ಕಾರ್ಯನಿರ್ವಾಹಕಿ ಸಿಂಥಿಯಾ ಕರೋಲ್, ಸಿಂಗಾಪುರ ಸರಕಾರದ ಬಂಡವಾಳ ಸಂಸ್ಥೆಯ ಮುಖ್ಯ ಕಾರ್ಯನಿರ್ವಾಹಕಿ ಹೂ ಚಿಂಗ್ ನಂತರದ ಸ್ಥಾನಗಳಲ್ಲಿ ಕಾಣಿಸಿದ್ದಾರೆ.
ಅಮೆರಿಕಾ ಸರಕಾರದ ಪ್ರಮುಖ ಹುದ್ದೆಯಲ್ಲಿದ್ದರೂ ಹಿಲರಿ ಕ್ಲಿಂಟನ್ ತನ್ನ ಸ್ಥಾನದಲ್ಲಿ ಮೇಲಕ್ಕೇರಲು ಸಾಧ್ಯವಾಗಿಲ್ಲ. ಕಳೆದ ವರ್ಷ ಅವರು ಪಡೆದಿದ್ದ 28ನೇ ಸ್ಥಾನದಿಂದ ಪ್ರಸಕ್ತ ವರ್ಷ 36ನೇ ಸ್ಥಾನಕ್ಕೆ ಕುಸಿದಿದ್ದಾರೆ.
ಅದೇ ಹೊತ್ತಿಗೆ ಮಿಚ್ಚೆಲ್ ಒಬಾಮಾ ಮೊತ್ತ ಮೊದಲ ಬಾರಿಗೆ ಈ ಪಟ್ಟಿಯಲ್ಲಿ ಕಾಣಿಸಿದ್ದಾರೆ. ಅಧ್ಯಕ್ಷ ಒಬಾಮಾರ ಪತ್ನಿಯಾಗಿರುವ ಇವರ ಸ್ಥಾನ 40. ಇಂಗ್ಲೆಂಡ್ ರಾಣಿ ಎಲಿಜಬೆತ್ II 42ನೇ ಸ್ಥಾನದಲ್ಲಿದ್ದಾರೆ.
ಸೋನಿಯಾಗೂ ಸ್ಥಾನ.. ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ ಫೋರ್ಬ್ಸ್ ಪಟ್ಟಿಯಲ್ಲಿ 13 ಹಾಗೂ ಮತ್ತೊಬ್ಬ ಭಾರತೀಯೆ ಐಸಿಐಸಿಐ ಬ್ಯಾಂಕಿನ ಮುಖ್ಯ ಕಾರ್ಯನಿರ್ವಾಹಕಿ ಚಂದ್ರಾ ಕೊಚ್ಚಾರ್ 20ನೇ ಸ್ಥಾನ ಪಡೆದುಕೊಂಡಿದ್ದಾರೆ.
ಫೋರ್ಬ್ಸ್ ಪಟ್ಟಿಯಲ್ಲಿ ಸೋನಿಯಾ 2004ರಲ್ಲಿ ಮೂರು, 2007ರಲ್ಲಿ ಆರು ಹಾಗೂ 2008ರಲ್ಲಿ 21ನೇ ಸ್ಥಾನ ಪಡೆದಿದ್ದರು.