ಬಹುಕೋಟಿ ಹಗರಣದ ಹಿನ್ನಲೆಯಲ್ಲಿ ಬಂಧಿತರಾಗಿರುವ ಸತ್ಯಂ ಕಂಪ್ಯೂಟರ್ಸ್ ಸಂಸ್ಥಾಪಕ ಬಿ. ರಾಮಲಿಂಗ ರಾಜು ಮತ್ತು ಇತರ ಏಳು ಮಂದಿಯ ನ್ಯಾಯಾಂಗ ಬಂಧನದ ಅವಧಿಯನ್ನು ಸ್ಥಳೀಯ ನ್ಯಾಯಾಲಯವು ಸೆಪ್ಟೆಂಬರ್ 2ರವರೆಗೆ ವಿಸ್ತರಿಸಿದೆ.
ಇಲ್ಲಿನ ಹೆಚ್ಚುವರಿ ನ್ಯಾಯಾಲಯದ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್, ರಾಜು ಮತ್ತು ಅವರ ಸಹೋದರ ಸತ್ಯಂ ಮಾಜಿ ವ್ಯವಸ್ಥಾಪಕ ನಿರ್ದೇಶಕ ರಾಮ ರಾಜು ಹಾಗೂ ಮಾಜಿ ಮುಖ್ಯ ಹಣಕಾಸು ಅಧಿಕಾರಿ ವದ್ಲಮಣಿ ಶ್ರೀನಿವಾಸ್‌ರ ನ್ಯಾಯಾಂಗ ಸೆರೆ ಅವಧಿಯನ್ನು ಸೆಪ್ಟೆಂಬರ್ 2ರವರಗೆ ವಿಸ್ತರಿಸಿದರು.
ಮಾಜಿ ಲೆಕ್ಕಪತ್ರ ತನಿಖಾ ಸಂಸ್ಥೆ ಪ್ರೈಸ್ ವಾಟರ್ ಹೌಸ್‌ನ ಎಸ್. ಗೋಪಾಲಕೃಷ್ಣನ್ ಮತ್ತು ತಲ್ಲೂರಿ ಶ್ರೀನಿವಾಸ್ ಸೇರಿದಂತೆ ಇತರ ಆರೋಪಿಗಳ ಬಂಧನ ಅವಧಿಯನ್ನೂ ವಿಸ್ತರಿಸಲಾಗಿದೆ.
ಬಂಧನದ ಅವಧಿ ಮುಕ್ತಾಯಗೊಂಡ ಹಿನ್ನಲೆಯಲ್ಲಿ ನ್ಯಾಯಾಲಯಕ್ಕೆ ಹಾಜರುಪಡಿಸಿದ ಹಗರಣದ ಎಲ್ಲಾ ಆರೋಪಿಗಳನ್ನು ಇದೀಗ ಇಲ್ಲಿನ ಚಂಚಲ್ಗುಡಾ ಜೈಲಿಗೆ ಕಳುಹಿಸಲಾಗಿದೆ.
ನಿರೀಕ್ಷಣಾ ಜಾಮೀನು ಪಡೆದುಕೊಂಡಿದ್ದ ಮತ್ತೊಬ್ಬ ಆರೋಪಿ ಸೂರ್ಯನಾರಾಯಣ ರಾಜು ಕೂಡ ಇದೇ ಸಂದರ್ಭದಲ್ಲಿ ನ್ಯಾಯಾಲಯಕ್ಕೆ ಹಾಜರಾಗಿದ್ದರು ಎಂದು ಸಿಬಿಐ ಸಲಹೆಗಾರರು ತಿಳಿಸಿದ್ದಾರೆ.
ಸತ್ಯಂ ಕಂಪ್ಯೂಟರ್ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕೋಟ್ಯಂತರ ರೂಪಾಯಿಗಳ ಅವ್ಯವಹಾರ ನಡೆಸಿದ್ದ ಆರೋಪದ ಮೇಲೆ ರಾಮಲಿಂಗ ರಾಜು ಸೇರಿದಂತೆ ಹಲವರನ್ನು ಬಂಧಿಸಲಾಗಿದೆ. ಪ್ರಸಕ್ತ ಸತ್ಯ ಕಂಪ್ಯೂಟರ್ಸ್ ಸಂಸ್ಥೆಯನ್ನು ಟೆಕ್ ಮಹೀಂದ್ರಾ ಖರೀದಿಸಿದ್ದು, ಕಂಪನಿ ಹೆಸರು ಕೂಡ ಬದಲಾಯಿಸಲಾಗಿದೆ.