ಕಂಪನಿಯ ಆದಾಯದಲ್ಲಿ ಎರಡನೇ ಸ್ಥಾನ ಪಡೆದುಕೊಂಡಿರುವ ಭಾರತದಲ್ಲಿ ತನ್ನ ಸಾಮ್ರಾಜ್ಯವನ್ನು ವಿಸ್ತರಿಸಲು ಪಣತೊಟ್ಟಿರುವ ನೋಕಿಯಾ, ಕರ್ನಾಟಕ ಸೇರಿದಂತೆ 12 ರಾಜ್ಯಗಳಲ್ಲಿ ಮೊಬೈಲ್ ಕೊಂಡುಕೊಳ್ಳಲು ಸಾಲದ ವ್ಯವಸ್ಥೆ ಜಾರಿಗೆ ತರುವುದಾಗಿ ಪ್ರಕಟಿಸಿದೆ.
PR
ನಾವು ಮೈಕ್ರೋಫೈನಾನ್ಸ್ ರೀತಿಯಲ್ಲಿ ಕಾರ್ಯನಿರ್ವಹಿಸಲಿದ್ದೇವೆ. ಮೊದಲು ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿ ನಾವು ಕಾರ್ಯಾರಂಭ ಮಾಡಲಿದ್ದೇವೆ. ಇದರ ಪ್ರಕಾರ ಪ್ರತೀ ವಾರ 100 ರೂಪಾಯಿಗಳನ್ನಷ್ಟೇ ಸಂಸ್ಥೆಗೆ ಪಾವತಿಸಿದರಾಯಿತು ಎಂದು ನೋಕಿಯಾ ಸಂಸ್ಥೆಯ ಅಧ್ಯಕ್ಷ ಹಾಗೂ ಮುಖ್ಯ ಕಾರ್ಯನಿರ್ವಾಹಕ ಓಲ್ಲಿ ಪೆಕ್ಕಾ ಕಲ್ಲಾಸುವೋ ತಿಳಿಸಿದ್ದಾರೆ.
ಸಾಮಾನ್ಯ ಗ್ರಾಹಕರಿಗಾಗಿ ನಾವು ಕಂತುಗಳಲ್ಲಿ ಹಣ ಪಾವತಿಸುವ ಯೋಜನೆಯನ್ನು ಜಾರಿಗೊಳಿಸುತ್ತಿದ್ದೇವೆ. ಪ್ರತೀ ವಾರ 100 ರೂಪಾಯಿಗಳಂತೆ 25 ವಾರಗಳ ಕಾಲ ಗ್ರಾಹಕರು ಹಣ ಪಾವತಿಸಬೇಕಾಗುತ್ತದೆ. ಇದಕ್ಕಾಗಿ ನಾವು ಮೈಕ್ರೋಫೈನಾನ್ಸ್ ಕಂಪನಿಗಳ ಜತೆ ಹೊಂದಾಣಿಕೆ ಮಾಡಿಕೊಂಡಿದ್ದೇವೆ ಎಂದು ಸಂಸ್ಥೆ ತಿಳಿಸಿದೆ.
ಆಂಧ್ರಪ್ರದೇಶ ಮತ್ತು ಕರ್ನಾಟಕದಲ್ಲಿನ 2,500 ಗ್ರಾಮಗಳಲ್ಲಿ ಇದನ್ನು ಸಂಸ್ಥೆ ಜಾರಿಗೆ ತರಲಿದೆ. ಈಗಾಗಲೇ 27,500 ಅರ್ಜಿಗಳನ್ನು ನೋಕಿಯಾ ಸ್ವೀಕರಿಸಿದೆ.
ನೋಕಿಯಾ 190,000 ಔಟ್‌ಲೆಟ್‌ಗಳನ್ನು ದೇಶದಾದ್ಯಂತ ಹೊಂದಿದ್ದು, ಬುಧವಾರ 'ನೋಕಿಯಾ ಲೈಫ್ ಟೂಲ್ಸ್' ಎಂಬ ಮಾಹಿತಿ ವಿಭಾಗವನ್ನೂ ಅನಾವರಣಗೊಳಿಸಿದೆ. ಇದರಲ್ಲಿ ಸುದ್ದಿ ಮತ್ತು ಕೃಷಿ, ವಿದ್ಯಾಭ್ಯಾಸ, ಮನರಂಜನೆ ಮಾಹಿತಿಗಳು ಸುಲಭವಾಗಿ ಲಭ್ಯ ಎಂದು ಸಂಸ್ಥೆ ಹೇಳಿಕೊಂಡಿದೆ.
ಜಾಗತಿಕವಾಗಿ 110 ಕೋಟಿ ಬಳಕೆದಾರರನ್ನು ಹೊಂದಿರುವ ನೋಕಿಯಾ ಪ್ರಮುಖ ಉತ್ಪಾದನಾ ಘಟಕವಿರುವುದು ಚೆನ್ನೈಯಲ್ಲಿ.
ನಾವು ಚೆನ್ನೈಯ ಘಟಕದಲ್ಲಿ 250 ಮಿಲಿಯನ್ ಡಾಲರ್‌ಗಳನ್ನು ಹೂಡಿಕೆ ಮಾಡಿದ್ದೇವೆ. ಅಲ್ಲಿ 8,000 ಉದ್ಯೋಗಿಗಳಿದ್ದಾರೆ. ಇಲ್ಲಿ ತಯಾರಿಸಲಾಗುವ ಮೊಬೈಲ್‌ಗಳಲ್ಲಿ ಅರ್ಧದಷ್ಟನ್ನು 59ಕ್ಕೂ ಹೆಚ್ಚು ದೇಶಗಳಿಗೆ ರಫ್ತು ಮಾಡುತ್ತಿದ್ದೇವೆ ಎಂದು ಕಲ್ಲಾಸುವೋ ತಿಳಿಸಿದ್ದಾರೆ.
ಭಾರತದಲ್ಲಿ ಇದುವರೆಗೆ 42.7 ಕೋಟಿ ನೋಕಿಯಾ ಮೊಬೈಲ್‌ಗಳು ಮಾರಾಟವಾಗಿದ್ದು, 2010ರ ವೇಳೆಗೆ ಇದು 50 ಕೋಟಿ ತಲುಪುವ ನಿರೀಕ್ಷೆಗಳಿವೆ ಎಂದು ಸಂಸ್ಥೆ ಹೇಳಿಕೊಂಡಿದೆ.