ಕಳೆದ ವಾರ 30 ವರ್ಷಗಳ ಕನಿಷ್ಠ ದರಕ್ಕೆ ಕುಸಿತ ಕಂಡಿದ್ದ ಹಣದುಬ್ಬರ ದರವು ಆಗಸ್ಟ್ 8ಕ್ಕೆ ಕೊನೆಗೊಂಡ ವಾರದಲ್ಲಿ ಆಂಶಿಕ ಏರಿಕೆ ದಾಖಲಿಸಿದೆ. ಕಳೆದ ವಾರ ವಾರ ಶೇ.(-)1.74ರಲ್ಲಿದ್ದ ಸಗಟು ಸೂಚ್ಯಂಕ ದರ ಶೇ.(-)1.53ಕ್ಕೆ ಸುಧಾರಣೆ ಕಂಡಿದೆ.
1995ರಲ್ಲಿ ನೂತನ ಸಗಟು ಸೂಚ್ಯಂಕ ದರ ಪದ್ಧತಿ ಆರಂಭವಾದ ನಂತರ ಮೊತ್ತ ಮೊದಲ ಬಾರಿಗೆ ಜೂನ್ 6ಕ್ಕೆ ಕೊನೆಗೊಂಡ ವಾರದಲ್ಲಿ ಋಣಾತ್ಮಕವಾಗಿ ಮೂಡಿ ಬಂದಿತ್ತು. ಅದರ ನಂತರ ಧನಾತ್ಮಕ ನಡೆಯನ್ನು ಹಣದುಬ್ಬರ ದರ ದಾಖಲಿಸಿಲ್ಲ.
ಪ್ರಸಕ್ತ ವಾರದಲ್ಲಿ ಅಗತ್ಯ ವಸ್ತುಗಳ ಸೂಚ್ಯಂಕವು 262.5ರಿಂದ (ತಾತ್ಕಾಲಿಕ) 262.9ಕ್ಕೆ ಶೇ.0.2ರ ಏರಿಕೆ ದಾಖಲಿಸಿದೆ. ಉತ್ಪಾದನಾ ವಸ್ತುಗಳ ಸೂಚ್ಯಂಕವು 205.9ರಿಂದ (ತಾತ್ಕಾಲಿಕ) 206.1ಕ್ಕೆ ಶೇ.0.1ರ ಏರಿಕೆ ಕಂಡಿದೆ.
ಅದೇ ಹೊತ್ತಿಗೆ ಇಂಧನ ಮತ್ತು ವಿದ್ಯುತ್ ಕ್ಷೇತ್ರಗಳ ದರ ಸೂಚ್ಯಂಕವು 338.3ರಿಂದ (ತಾತ್ಕಾಲಿಕ) 338.2ಕ್ಕೆ ಕುಸಿತವಾಗಿದೆ.
ಸಜ್ಜೆ, ಉದ್ದು, ಮಸಾಲೆ ಮತ್ತು ಸಾಂಬಾರ ಪದಾರ್ಥಗಳು, ಬೇಳೆಕಾಳು, ಹಣ್ಣು-ಹಂಪಲುಗಳು ಮತ್ತು ತರಕಾರಿ ಬೆಲೆ ಪ್ರಸಕ್ತ ವಾರವೂ ಹೆಚ್ಚಳವಾಗಿತ್ತು. ಆದರೆ ಜೋಳ (ಶೇ.4), ಬಾರ್ಲಿ (ಶೇ.2) ಹಾಗೂ ಹೆಸರುಬೇಳೆ (ಶೇ.1) ಬೆಲೆಯಲ್ಲಿ ಕುಸಿತ ಕಂಡಿದೆ.
ಒಟ್ಟಾರೆ ಹಣದುಬ್ಬರ ದರದಲ್ಲಿ ಶೇ.63.75ರಷ್ಟು ಪಾಲು ಹೊಂದಿರುವ ಉತ್ಪಾದನಾ ವಸ್ತುಗಳು ಈ ಬಾರಿಯ ಹಣದುಬ್ಬರ ದರ ಏರಿಕೆಯಲ್ಲಿ ಮಹತ್ವದ ಪಾತ್ರವಹಿಸಿವೆ.
ಆಗಸ್ಟ್ 8ಕ್ಕೆ ಕೊನೆಗೊಂಡ ವಾರದಲ್ಲಿ ತುಪ್ಪ, ಖಾದ್ಯ ತೈಲ, ಸೋಜಿ ಮುಂತಾದ ದಿನ ಬಳಕೆಯ ವಸ್ತುಗಳ ದರದಲ್ಲಿ ಅಲ್ಪ ಮಟ್ಟದ ಏರಿಕೆಯಾಗಿತ್ತು.