ಕಂಪ್ಯೂಟರ್‌ಗಳಿಗೆ ವೈರಸ್ ಹಾಗೂ ಇನ್ನಿತರ ಮಾಲ್‌ವೇರ್‌ಗಳ ಮೂಲಕ ಹಾನಿಯುಂಟು ಮಾಡಬಹುದಾದ ದುಷ್ಟ ವೆಬ್‌ಸೈಟ್‌ಗಳ ಅಗ್ರ 100ರ ಪಟ್ಟಿಯನ್ನು ಇಂಟರ್ನೆಟ್ ಸೆಕ್ಯುರಿಟಿ ಸಂಸ್ಥೆ ನಾರ್ಟನ್ ಸಿಮನ್ಟೆಕ್ ಬಿಡುಗಡೆ ಮಾಡಿದೆ.
ಮಾಲ್‌ವೇರ್ ಎನ್ನವುದು ಒಂದು ತಂತ್ರಾಂಶ. ಇದು ಕಂಪ್ಯೂಟರ್ ಮಾಲಕರ ಒಪ್ಪಿಗೆ ಪಡೆಯದೆ ಅದರಲ್ಲಿದ್ದ ಮಾಹಿತಿಯನ್ನು ನಾಶ ಮಾಡುವ ಅಥವಾ ಕದಿಯುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ನಾವು ಪಟ್ಟಿ ಮಾಡಿರುವ ವೆಬ್‌ಸೈಟ್‌ಗಳನ್ನು ಸಂದರ್ಶಿಸುವುದರಿಂದ ಕಂಪ್ಯೂಟರ್‌ಗಳಿಗೆ ಹಾನಿಯಾಗಬಹುದು ಮತ್ತು ಕಂಪ್ಯೂಟರಿನಲ್ಲಿರುವ ವೈಯಕ್ತಿಕ ಮಾಹಿತಿಗಳು ಅಪರಿಚಿತರ ಕೈ ಸೇರಬಹುದು ಎಂದು ಆಂಟಿ-ವೈರಸ್ ಕಂಪನಿಯ ವಕ್ತಾರ ನತಾಲಿಯೇ ಕೊನ್ನೋರ್ ಎಚ್ಚರಿಸಿದ್ದಾರೆ.
ಈ ಪಟ್ಟಿಯನ್ನು ಇಂಟರ್ನೆಟ್ ಸುರಕ್ಷತಾ ಕ್ರಮಗಳನ್ನು ವಿಶ್ಲೇಷಿಸಿಸಿ ಜಾಗತಿಕ ವರದಿ ನೀಡುವ 'ನಾರ್ಟನ್ ಸೇಫ್ ವೆಬ್' ಎಂಬ ವೆಬ್‌ಸೈಟ್ ಸಹಕಾರದಿಂದ ತಯಾರಿಸಲಾಗಿದೆ.
ಅದರಲ್ಲಿ ತಿಳಿಸಿರುವ ವೆಬ್‌ಸೈಟ್‌ಗಳಿವು: 17ಇಬುಕ್.ಕಾಮ್, ಆಲಾಡೆಲ್.ನೆಟ್, ಕ್ಲಿಕ್‌ನ್ಯೂಸ್.ಕಾಮ್, ಜಿಎನ್‌ಸಿಆರ್.ಆರ್ಗ್, ಹಿಹಾನಿನ್.ಕಾಮ್, ಪ್ರೊನ್‌ಲೈನ್.ಆರ್‌ಯು ಮುಂತಾದುವು.
ಬಾಧೆಗೊಳಗಾದ ಗ್ರಾಹಕರ ವೆಬ್‌ಸೈಟ್‌ಗಳು ಸರಾಸರಿ 18,000 ಹಾಗೂ ಶೇ.40ಕ್ಕಿಂತ ಹೆಚ್ಚಿನ ದುಷ್ಟ ಸೈಟ್‌ಗಳು 20,000ಕ್ಕೂ ಹೆಚ್ಚು ಅಪಾಯಕಾರಿ ಫೈಲ್‌ಗಳನ್ನು ಹೊಂದಿರುತ್ತವೆ. ಅಲ್ಲದೆ ಈ ಪಟ್ಟಿಯಲ್ಲಿರುವ ಶೇ.75ರಷ್ಟು ಸೈಟ್‌ಗಳು ಕಳೆದ ಆರು ತಿಂಗಳುಗಳಿಂದ ಮಾಲ್‌ವೇರ್‌ಗಳನ್ನು ಇಂಟರ್ನೆಟ್ ಮೂಲಕ ಪಸರಿಸುತ್ತಿರುವುದನ್ನು ಕಂಡುಕೊಳ್ಳಲಾಗಿದೆ ಎಂದು ನಾರ್ಟನ್ ವಿವರಿಸಿದೆ.
ಇಲ್ಲಿ ಪಟ್ಟಿ ಮಾಡಲಾಗಿರುವ ಬಹುತೇಕ ವೆಬ್‌ಸೈಟ್‌ಗಳು ಪ್ರಕಟಣೆಗೆ ಅನರ್ಹವಾದ ವಯಸ್ಕರ ಮಾಹಿತಿ ಅಥವಾ ಸೆಕ್ಸ್ ಚಿತ್ರಗಳನ್ನು ಒಳಗೊಂಡಿವೆ ಎಂದು ಹೇಳಿಕೊಂಡು ಬಳಕೆದಾರರನ್ನು ಸೆಳೆದುಕೊಳ್ಳುತ್ತವೆ. ಆ ಮೂಲಕ ಕಂಪ್ಯೂಟರ್‌ಗಳನ್ನು ನಾಶ ಮಾಡುತ್ತಿವೆ ಎಂದು ಕೊನ್ನೊರ್ ತಿಳಿಸಿದ್ದಾರೆ.