ಇಲ್ಲಿನ ಹೊಟೇಲ್‌ವೊಂದು 32.5 ಅಡಿ ಅಗಲದ ದೋಸೆಯನ್ನು 40 ನಿಮಿಷಕ್ಕಿಂತಲೂ ಕಡಿಮೆ ಅವಧಿಯಲ್ಲಿ ನಿರ್ಮಿಸಿ ಗಿನ್ನೆಸ್ ದಾಖಲೆ ಮಾಡಲು ಹೊರಟಿದೆ.
ಅದು ಅಂತಿಂಥ ದೋಸೆಯಲ್ಲ. 32 ಅಡಿಯನ್ನೂ ಮೀರಿಸುವ ಭಾರೀ ದೋಸೆ. ಅದಕ್ಕವರು ತೆಗೆದುಕೊಂಡ ಸಮಯ ಕೇವಲ 40 ನಿಮಿಷಗಳು. ಈ ದೋಸೆಯನ್ನು ಮಾಡಲು 16 ಮಂದಿ ಬಾಣಸಿಗರು ಹಾಗೂ ಎಂಟು ಮಂದಿ ಸಹಾಯಕರು ಶ್ರಮವಹಿಸಿದ್ದಾರೆ. ಪೂರ್ವತಯಾರಿಗಾಗಿ 10 ದಿನಗಳೇ ಬೇಕಾಯಿತಂತೆ.
ದೋಸೆಯನ್ನು ನಿರ್ಮಿಸಿರುವುದು 'ಸಂಕಲ್ಪ್' ಎನ್ನುವ ರೆಸ್ಟಾರೆಂಟ್. ತೆಲುಗು ನಟ ರಾಜೇಂದ್ರ ಪ್ರಸಾದ್‌ರವರ ಮುಂದಿನ ಚಿತ್ರ 'ಕ್ವಿಕ್ ಗನ್ ಮುರುಗನ್'ನಲ್ಲಿ ಈ ದೋಸೆ ಮಹತ್ವದ ಪಾತ್ರವಹಿಸುತ್ತದೆಯಂತೆ.
2006ರಲ್ಲಿ 30 ಅಡಿ ವಿಸ್ತಾರದ ದೋಸೆ ಮಾಡುವ ಮೂಲಕ ನಾವು ವಿಶ್ವದಲ್ಲೇ ಬೃಹತ್ ದೋಸೆ ತಯಾರಿಸಿದ ಗಿನಿಸ್ ದಾಖಲೆ ನಿರ್ಮಿಸಿದ್ದೇವೆ. ಆ ದಾಖಲೆಯನ್ನು 32.5 ಅಡಿ ಅಗಲದ ದೋಸೆ ಮಾಡುವುದರೊಂದಿಗೆ ನಾವೇ ಮುರಿದಿದ್ದೇವೆ ಎಂದು 'ಸಂಕಲ್ಪ್' ಹೊಟೇಲ್ ಸಮೂಹದ ಪ್ರಧಾನ ವ್ಯವಸ್ಥಾಪಕ ನಿರ್ದೇಶಕ ಕೈಲಾಸ್ ಗೋಯೆಂಕಾ ತಿಳಿಸಿದ್ದಾರೆ.
ದೋಸೆ ತಯಾರಿಸಿದ ನಂತರ ಅದಕ್ಕೆ 'ಕ್ವಿಕ್ ಗನ್ ಮುರುಗನ್' ಎಂದು ಹೆಸರಿಸಲಾಗಿದೆ. ಸಸ್ಯಾಹಾರದ ಶ್ರೇಷ್ಠತೆಯೇ ಈ ಸಿನಿಮಾದ ಹೈಲೈಟ್. ಆಗಸ್ಟ್ 28ರಂದು ಇದು ಹಲವು ಭಾಷೆಗಳಲ್ಲಿ ವಿಶ್ವದಾದ್ಯಂತ ಬಿಡುಗಡೆಯಾಗಲಿದೆ. ಸಿನಿಮಾದಲ್ಲಿ ದೋಸೆಯನ್ನು ತೋರಿಸಲಾಗುತ್ತದೆ ಎಂದು ಅವರು ತಿಳಿಸಿದ್ದಾರೆ.
9.75 ಮೀಟರ್ ಅಗಲದ ಈ ದೋಸೆಯನ್ನು ಹಲವರ ಸಹಾಯದಿಂದ 'ಕ್ವಿಕ್ ಗನ್ ಮುರುಗನ್' ಸಿನಿಮಾದ ಪ್ರಚಾರಕ್ಕಾಗಿ ನಂತರ ತೆಗೆದುಕೊಂಡು ಹೋಗಲಾಯಿತು. 35 ಅಡಿ ಅಗಲದ ಕಾವಲಿಯು ತೀವ್ರ ಉಷ್ಣತೆಯಿಂದಿರುವಾಗ ಅದರಲ್ಲಿ ದೋಸೆ ಹೊಯ್ಯಲು ತೀರಾ ಕಷ್ಟಪಡಬೇಕಾಯಿತು ಎಂದು ದೋಸೆ ತಯಾರಕರು ಹೇಳಿಕೊಂಡಿದ್ದಾರೆ.