ಕಡಿಮೆ ಪ್ರಯಾಣ ದರದ ವೈಮಾನಿಕ ಸೇವೆಯನ್ನು ವಿಸ್ತರಿಸಲಿರುವ ಖಾಸಗಿ ವಿಮಾನಯಾನ ಸಂಸ್ಥೆ ಜೆಟ್ ಏರ್‌ವೇಸ್, ತನ್ನ 45 ವಿಮಾನ ಹಾರಾಟಗಳನ್ನು ಐಷಾರಾಮರಹಿತ ಬ್ರಾಂಡ್ 'ಜೆಟ್ ಏರ್‌ವೇಸ್ ಕೊನೆಕ್ಟ್'ಗೆ ಅಕ್ಟೋಬರ್ ಒಳಗೆ ವರ್ಗಾಯಿಸಲಿದೆ.
ಜೆಟ್ ಏರ್‌ವೇಸ್ ಕೊನೆಕ್ಟ್ ಸೆಪ್ಟೆಂಬರ್‌ನಿಂದ ಅಕ್ಟೋಬರ್ 1ರೊಳಗೆ ಮುಂಬೈ, ದೆಹಲಿ, ಚೆನ್ನೈ, ಬೆಂಗಳೂರು ಮತ್ತು ಕೊಲ್ಕತ್ತಾ ಮೆಟ್ರೋ ನಗರಗಳನ್ನು ಸಂಪರ್ಕಿಸುವ ಹೊಸ ವಿಮಾನ ಹಾರಾಟಗಳನ್ನು ಆರಂಭಿಸಲಿದೆ.
ಒಂಬತ್ತು ಬೋಯಿಂಗ್ ಮತ್ತು 11 ಎಟಿಆರ್ ವಿಮಾನಗಳೊಂದಿಗೆ ಪ್ರಸಕ್ತ ಇದು ದಿನಂಪ್ರತಿ 135 ಹಾರಾಟ ಸೇವೆ ಸಲ್ಲಿಸುತ್ತಿದೆ. ಇದಕ್ಕೆ ಬೋಯಿಂಗ್ 737 ಜೆಟ್ ಮಾದರಿಯ ಆರು ಹೆಚ್ಚುವರಿ ವಿಮಾನಗಳನ್ನು ಸೇರಿಸುವ ಮೂಲಕ ದಿನಂಪ್ರತಿ 180 ಹಾರಾಟಗಳನ್ನು ನಡೆಸಲಿದೆ.
ಜೆಟ್ ಏರ್‌ವೇಸ್ ಕೊನೆಕ್ಟ್ ದೇಶದಾದ್ಯಂತದ ಪ್ರಯಾಣಿಕರಿಗೆ ಅತ್ಯುತ್ತಮ ಸೇವೆ ನೀಡುವ ಮೂಲಕ ಜನಪ್ರಿಯವಾಗಿದೆ. ಕೊನೆಕ್ಟ್‌ಗೆ ಪ್ರಬಲ ಬೇಡಿಕೆಯಿರುವ ಕಾರಣ ನಾವು ಹಾರಾಟ ನಡೆಸಲುದ್ದೇಶಿಸಿರುವ ಹೊಸ ಹಾರಾಟಗಳು ಕೂಡ ಯಶಸ್ವಿಯಾಗುವ ಬಗ್ಗೆ ನಮ್ಮಲ್ಲಿ ಭರವಸೆಗಳಿವೆ ಎಂದು ಜೆಟ್ ಏರ್‌ವೇಸ್ ಪ್ರಧಾನ ಕಾರ್ಯನಿರ್ವಹಣಾಧಿಕಾರಿ ವೂಲ್ಫ್‌ಗಾಂಗ್ ಪ್ರಾಕ್ ಸೌಚರ್ ತನ್ನ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಕೊಲ್ಕತ್ತಾ - ಗುವಾಹತಿ ನಡುವೆ ಸೆಪ್ಟೆಂಬರ್ 3ರಿಂದ, ದೆಹಲಿ - ಚೆನ್ನೈ ನಡುವೆ ಸೆಪ್ಟೆಂಬರ್ 15ರಿಂದ ಹಾಗೂ ದೆಹಲಿ - ಕೊಲ್ಕತ್ತಾ ನಡುವೆ ಅಕ್ಟೋಬರ್ 1ರಿಂದ ವೈಮಾನಿಕ ಸೇವೆಯನ್ನು ಆರಂಭಿಸುವ ಮೂಲಕ ತನ್ನ ಕಾರ್ಯವ್ಯಾಪ್ತಿಯನ್ನು ಜೆಟ್ ಏರ್‌ವೇಸ್ ಕೊನೆಕ್ಟ್ ವಿಸ್ತರಿಸಲಿದೆ.