ಮಳೆ ಅಭಾವದಿಂದಾಗಿ ಉಂಟಾಗಿರುವ ಪರಿಣಾಮಗಳ ಬಗ್ಗೆ ಚಿಂತೆಗೀಡಾಗಿರುವ ಕೇಂದ್ರ ಸರಕಾರವು ಈ ಸಂಬಂಧ ರಾಜ್ಯ ಕೃಷಿ ಸಚಿವರುಗಳ ಜತೆ ಶುಕ್ರವಾರ ಮಾತುಕತೆ ನಡೆಸಲಿದೆ.
ಬಿತ್ತನೆ ಕಾರ್ಯ ಸ್ಥಗಿತವಾಗಿರುವುದರಿಂದ ಕೃಷ್ಯುತ್ಪನ್ನಗಳಲ್ಲಿ ತೀರಾ ಕುಸಿತ ಕಂಡು ಬಂದಿದ್ದು, ಇದನ್ನು ಚೇತರಿಕೆ ಹಂತಕ್ಕೆ ಕೊಂಡೊಯ್ಯುವ ಮಾರ್ಗಗಳ ಬಗ್ಗೆ ಕೇಂದ್ರ ಆಹಾರ ಮತ್ತು ಕೃಷಿ ಸಚಿವ ಶರದ್ ಪವಾರ್ ಚರ್ಚೆ ನಡೆಸಲಿದ್ದಾರೆ.
ಮುಂಗಾರು ಬೆಳೆಯಲ್ಲಿ ನಷ್ಟವುಂಟಾಗಿದ್ದು, ಅದರ ರಕ್ಷಣೆಗೆ ತೆಗೆದುಕೊಳ್ಳಬೇಕಾದ ಅಗತ್ಯ ಕ್ರಮಗಳು ಮತ್ತು ಹಿಂಗಾರಿ ಅವಧಿಯಲ್ಲಿ ಬೆಳೆ ವೃದ್ಧಿಸಿ ಸಮತೋಲನ ಮಾಡಿಕೊಳ್ಳಲು ಏನೇನು ಮಾಡಬೇಕೆಂದು ಪವಾರ್ ಅಧ್ಯಕ್ಷತೆಯಲ್ಲಿ ಸಮಾಲೋಚನೆ ನಡೆಯಲಿದೆ ಎಂದು ಸಚಿವಾಲಯ ತಿಳಿಸಿದೆ.
ಈ ಸಭೆಯಲ್ಲಿ ವಿತ್ತ ಸಚಿವ ಪ್ರಣಬ್ ಮುಖರ್ಜಿ, ಗ್ರಾಮೀಣಾಭಿವೃದ್ಧಿ ಸಚಿವ ಸಿ.ಪಿ. ಜೋಷಿ ಮುಂತಾದವರು ಕೂಡ ಪಾಲ್ಗೊಳ್ಳಲಿದ್ದಾರೆ.
ಪ್ರಸಕ್ತ ಅಂದಾಜಿನ ಪ್ರಕಾರ ಜೂನ್‌ನಿಂದ ಸೆಪ್ಟೆಂಬರ್ ಅವಧಿಯ ಅಕ್ಕಿ ಉತ್ಪಾದನೆಯಲ್ಲಿ 10 ಮಿಲಿಯನ್ ಟನ್‌ಗಳಷ್ಟು ಕುಸಿತವಾಗಲಿದೆ. ಮಳೆ ಅಭಾವದಿಂದಾಗಿ ತೈಲಬೀಜ ಮತ್ತು ಕಬ್ಬು ಬೆಳೆಯ ಫಲಿತಾಂಶವೂ ತೀರಾ ಕಡಿಮೆಯಾಗಿರಬಹುದು ಎಂದು ನಿರೀಕ್ಷಿಸಲಾಗಿದೆ.
ಈ ನಡುವೆ ಸರಕಾರವು ಪ್ರತೀ ಕ್ವಿಂಟಲ್ ಭತ್ತಕ್ಕೆ 100 ರೂಪಾಯಿ ಹಾಗೂ ಧಾನ್ಯಕ್ಕೆ 240 ರೂಪಾಯಿಗಳ ಪ್ರೋತ್ಸಾಹ ಧನವನ್ನು ಹೆಚ್ಚುವರಿಯಾಗಿ ಪ್ರಕಟಿಸಿದೆ.
ದೇಶದಾದ್ಯಂತ 246 ಜಿಲ್ಲೆಗಳನ್ನು ಈಗಾಗಲೇ ಬರಪೀಡಿತ ಎಂದು ಘೋಷಿಸಲಾಗಿದೆ. ಅಂಕಿ ಅಂಶಗಳ ಪ್ರಕಾರ ದೇಶದ ಅರ್ಧದಷ್ಟು ಭಾಗ ಬರಗಾಲ ಎದುರಿಸುತ್ತಿದೆ. ಈ ಹಿನ್ನಲೆಯಲ್ಲಿ ಆಹಾರ ವಸ್ತುಗಳ ಬೆಲೆ ಗಗನಕ್ಕೇರಿದ್ದು, ಮುಂಬರುವ ದಿನಗಳಲ್ಲಿ ಮತ್ತಷ್ಟು ಏರಿಕೆಯಾಗುವ ಮೂಲಕ ಜನಸಾಮಾನ್ಯರ ಬದುಕು ದುಸ್ತರವಾಗಲಿದೆ ಎಂದು ಹೇಳಲಾಗಿದೆ.