ಬರಗಾಲದ ಕಾರಣದಿಂದ ಆಹಾರೋತ್ಪಾದನೆ ಮತ್ತು ಕೃಷ್ಯುತ್ಪನ್ನಗಳಲ್ಲಿ ಕುಸಿತವುಂಟಾಗಿರುವುದರಿಂದ, ಅಂತಹ ವಸ್ತುಗಳ ದೇಶೀಯ ಬೇಡಿಕೆಯನ್ನು ಸರಿಗಟ್ಟಲು ಕೇಂದ್ರ ಸರಕಾರವು ವಿದೇಶದಿಂದ ಆಮದು ಮಾಡಿಕೊಳ್ಳಲಿದೆ.
ರಾಜ್ಯ ಕೃಷಿ ಸಚಿವರನ್ನುದ್ದೇಶಿಸಿ ಮಾತನಾಡುತ್ತಿದ್ದ ವಿತ್ತ ಸಚಿವ ಪ್ರಣಬ್ ಮುಖರ್ಜಿ ಸರಕಾರದ ನಿರ್ಧಾರವನ್ನು ಪ್ರಕಟಿಸಿದರು.
ಕೊರತೆಯುಂಟಾಗಿರುವ ಅಗತ್ಯ ವಸ್ತುಗಳ ಬೇಡಿಕೆಯನ್ನು ಪೂರೈಸಲು ನಾವು ಆಮದು ಮಾಡಿಕೊಳ್ಳಲಿದ್ದೇವೆ. ಈ ಕುರಿತ ನಿರ್ಧಾರವನ್ನು ಈಗಾಗಲೇ ತೆಗೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಪ್ರಸಕ್ತ ಧಾನ್ಯಗಳು ಮತ್ತು ಖಾದ್ಯ ತೈಲಗಳ ಕೊರತೆಯನ್ನು ನಾವು ಅನುಭವಿಸುತ್ತಿದ್ದೇವೆ. ಆದರೆ ನಾವು ಯಾವಾಗ ಆಮದು ಮಾಡಿಕೊಳ್ಳುತ್ತೇವೆ ಎಂಬುವುದನ್ನು ಸರಕಾರ ಪ್ರಕಟಿಸುವುದಿಲ್ಲ. ಇದರಿಂದಾಗಿ ಅಂತರಾಷ್ಟ್ರೀಯ ಪೂರೈಕೆದಾರರು ಕೃತಕ ಬೆಲೆಯೇರಿಕೆಯಲ್ಲಿ ತೊಡಗುವ ಅಪಾಯವಿರುತ್ತದೆ. ಭಾರತಕ್ಕೆ ಬೇಡಿಕೆಯಿರುವ ವಸ್ತುಗಳ ಬೆಲೆಯೇರಿಸುವ ಮೂಲಕ ಲಾಭ ಮಾಡಿಕೊಳ್ಳಲು ಯತ್ನಿಸುತ್ತಾರೆ ಎಂದು ಅವರು ವಿವರಿಸಿದ್ದಾರೆ.
ಬರಗಾಲದ ಪರಿಣಾಮಗಳ ಬಗ್ಗೆ ಮಾತನಾಡುತ್ತಾ ಹಣಕಾಸು ಸಚಿವರು, ಇದು ಕೇವಲ ಉತ್ಪಾದನೆ ಮೇಲೆ ಮಾತ್ರ ದುಷ್ಪರಿಣಾಮ ಬೀರುವುದಲ್ಲ; ಬಹುತೇಕ ಎಲ್ಲಾ ವಲಯಗಳಲ್ಲೂ ಹಂತ ಹಂತವಾಗಿ ಬಾಧಿಸುತ್ತದೆ. ಮಳೆ ಅಭಾವದಿಂದಾಗಿ ನೀರಿನ ತಳಮಟ್ಟದ ಮೇಲೂ ಕೆಟ್ಟ ಪರಿಣಾಮ ಬೀರುತ್ತದೆ ಎಂದು ಭೀತಿ ವ್ಯಕ್ತಪಡಿಸಿದರು.
ಅದೇ ಹೊತ್ತಿಗೆ ಈ ಸರಕಾರವು ಇಂತಹ ಪರಿಸ್ಥಿತಿಯನ್ನು ನಿಭಾಯಿಸಲು ಸಾಕಷ್ಟು ಅನುಭವ ಹೊಂದಿದೆ ಎಂದಿರುವ ಅವರು, ನಾವು ಆತ್ಮವಿಶ್ವಾಸವನ್ನು ಕಳೆದುಕೊಳ್ಳುವ ಅಗತ್ಯವಿಲ್ಲ ಎಂದಿದ್ದಾರೆ.
ಏಪ್ರಿಲ್ 1, 2010ರೊಳಗೆ 18 ಮಿಲಿಯನ್ ಟನ್ ಗೋಧಿ ಮತ್ತು 2009, ಅಕ್ಟೋಬರ್ 1ರೊಳಗೆ 13.6 ಮಿಲಿಯನ್ ಟನ್ ಅಕ್ಕಿ ದಾಸ್ತಾನು ಮಾಡುವ ಭರವಸೆ ಸರಕಾರದ್ದು.