ಶೇರು ಮಾರುಕಟ್ಟೆಯಲ್ಲಿನ ಪ್ರಗತಿಯ ಹೊರತಾಗಿಯೂ ಬೇಡಿಕೆ ಕಳೆದುಕೊಂಡ ಚಿನಿವಾರ ಪೇಟೆ, ಪ್ರತೀ 10 ಗ್ರಾಂ ಚಿನ್ನದಲ್ಲಿ 50 ರೂಪಾಯಿಗಳಂತೆ ಕುಸಿತ ಕಂಡಿದ್ದು, 15,110 ರೂಪಾಯಿಗಳನ್ನು ತಲುಪಿದೆ.
ಚಿನ್ನ ಬೆಲೆ ಗರಿಷ್ಠ ಮಟ್ಟದಲ್ಲಿರುವ ಕಾರಣ ಚಿಲ್ಲರೆ ಗ್ರಾಹಕರು ಖರೀದಿಗೆ ಹಿಂದೇಟು ಹಾಕಿದ್ದು, ಮುಂದೂಡಿದ್ದಾರೆ. ಅಲ್ಲದೆ ಅವರು ಶೀಘ್ರದಲ್ಲೇ ಚಿನ್ನ ದರ ಇಳಿಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಇದರಿಂದಾಗಿ ಚಿನಿವಾರ ಪೇಟೆ ಕುಸಿತಕ್ಕೊಳಗಾಯಿತು ಎಂದು ಮಾರುಕಟ್ಟೆ ಮಂದಿ ತಿಳಿಸಿದ್ದಾರೆ.
ಜತೆಗೆ ಚಿನಿವಾರ ಪೇಟೆಯಿಂದ ಹಣ ಕೂಡ ಶೇರು ಮಾರುಕಟ್ಟೆಯತ್ತ ಹರಿದಿದೆ ಎಂದು ಅವರು ಅಭಿಪ್ರಾಯಪಟ್ಟರು.
ಶೇರು ಮಾರುಕಟ್ಟೆಯು ಸತತ ಎರಡನೇ ದಿನವಾದ ಇಂದು ಕೂಡ ಏರಿಕೆ ದಾಖಲಿಸಿದೆ. ಕ್ಷಿಪ್ರ ಏರಿಕೆಯ ಪ್ರಮಾಣಗಳೂ ಗರಿಷ್ಠವಾಗಿ ಕಂಡು ಬಂದ ಕಾರಣ ಶೇರುದಾರರು ಆಕರ್ಷಿತರಾಗಿದ್ದಾರೆ ಎನ್ನಲಾಗಿದೆ.
ಅದೇ ಹೊತ್ತಿಗೆ ಬೆಳ್ಳಿ ದರ ಕೂಡ ಪ್ರತೀ ಕಿಲೋವೊಂದರಲ್ಲಿ 50 ರೂಪಾಯಿಗಳಂತೆ ಕಳೆದುಕೊಂಡು 22,950 ರೂಪಾಯಿಗಳನ್ನು ತಲುಪಿದೆ. ಉತ್ಕೃಷ್ಟ ಚಿನ್ನ ಮತ್ತು ಆಭರಣಗಳ ದರದಲ್ಲಿ 50 ರೂಪಾಯಿಗಳು ಕುಸಿದಿದ್ದು, ಕ್ರಮವಾಗಿ 15,110 ಹಾಗೂ 14,960 ರೂಪಾಯಿಗಳನ್ನು ಪ್ರತೀ 10 ಗ್ರಾಂಗಳಿಗೆ ದಾಖಲಿಸಿದೆ.
ಚಿನ್ನದ ಬೆಲೆಯಲ್ಲಿ ಕುಸಿತ ಕಂಡಿದ್ದರೂ ಪವನ್ ಚಿನ್ನದಲ್ಲಿ ಕುಸಿತವಾಗಿಲ್ಲ. ಪ್ರತೀ ಎಂಟು ಗ್ರಾಂಗಳ ಬೆಲೆ 12,500 ರೂಪಾಯಿಗಳಲ್ಲೇ ಮುಂದುವರಿದಿದೆ.
ಇದೇ ಬೆಳವಣಿಗೆ ಸಿದ್ಧ ಬೆಳ್ಳಿಯಲ್ಲಿ ಕಂಡು ಬಂದಿದ್ದು, 50 ರೂಪಾಯಿ ಕುಸಿದಿದೆ. ಇಲ್ಲಿ ಪ್ರತೀ ಕೇಜಿ ಬೆಲೆ 22,950 ರೂಪಾಯಿಗಳು. ವಾರವನ್ನಾಧರಿಸಿದ ವಿತರಣೆಯಲ್ಲಿ 330 ರೂಪಾಯಿಗಳು ಕಡಿಮೆಯಾಗಿದ್ದು, 22,740 ರೂಪಾಯಿಗಳನ್ನು ದಾಖಲಿಸಿದೆ.